ADVERTISEMENT

ಪ್ರಾಣಿ ಕಲ್ಯಾಣ, ಪಶುಸಂಗೋಪನೆಗೆ ಸಮಗ್ರ ಯೋಜನೆ ಅಗತ್ಯ: ಸುರೇಶ್ ಬಿ. ಇಟ್ನಾಳ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:58 IST
Last Updated 12 ಫೆಬ್ರುವರಿ 2026, 6:58 IST
ಕೊಪ್ಪಳದಲ್ಲಿ ನಡೆದ ಪಶುಸಂಗೋಪನೆ ಕಲ್ಯಾಣ ಮಾಸಾಚರಣೆಯಲ್ಲಿ ಮುಖ್ಯಾಧಿಕಾರಿಗಳಿಗೆ  ಸನ್ಮಾನಿಸಲಾಯಿತು
ಕೊಪ್ಪಳದಲ್ಲಿ ನಡೆದ ಪಶುಸಂಗೋಪನೆ ಕಲ್ಯಾಣ ಮಾಸಾಚರಣೆಯಲ್ಲಿ ಮುಖ್ಯಾಧಿಕಾರಿಗಳಿಗೆ  ಸನ್ಮಾನಿಸಲಾಯಿತು   

ಕೊಪ್ಪಳ: ‘ಪ್ರಾಣಿ ಕಲ್ಯಾಣ ಮತ್ತು ಪಶುಸಂಗೋಪನೆಗೆ ಸಮಗ್ರ ಯೋಜನೆ ಅಗತ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘದ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ ಹೇಳಿದರು.

ಇಲ್ಲಿನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ, ಜಿಲ್ಲಾ ಪ್ರಾಣಿ ದಯಾ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಶುಸಂಗೋಪನೆ ಹಾಗೂ ಪ್ರಾಣಿ ಕಲ್ಯಾಣ ಮಾಸಾಚರಣೆ ಅಂಗವಾಗಿ ವಿಭಾಗ ಮಟ್ಟದ ಒಂದು ದಿನದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಾಣಿ ಕಲ್ಯಾಣವು ಕೇವಲ ಪ್ರಾಣಿಗಳ ರಕ್ಷಣೆಗಷ್ಟೇ ಸೀಮಿತವಲ್ಲ, ಅದು ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಆರ್ಥಿಕತೆಯೊಂದಿಗೆ ನೇರವಾಗಿ ಸಂಬಂಧಿಸಿದೆ. ಪ್ರಾಣಿಗಳ ಮೇಲೆ ಹಿಂಸೆ ತಡೆಯುವುದು ಹಾಗೂ ಅವುಗಳಿಗೆ ಸೂಕ್ತ ಆಶ್ರಯ, ಆಹಾರ ಮತ್ತು ಚಿಕಿತ್ಸೆಯನ್ನು ಒದಗಿಸುವುದು ನಮ್ಮ ಸಮಾಜದ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳ ಜನಸಂಖ್ಯೆ ನಿಯಂತ್ರಣ, ನಿಯಮಿತ ಲಸಿಕಾ ಕಾರ್ಯಕ್ರಮ, ರೇಬೀಸ್ ತಡೆ ಹಾಗೂ ಪಶು ವೈದ್ಯಕೀಯ ಶಿಬಿರಗಳನ್ನು ಸಮನ್ವಯದೊಂದಿಗೆ ನಡೆಸುವ ಅಗತ್ಯವಿದೆ’ ಎಂದರು.

ADVERTISEMENT

ಬೀದರ್‌ ಪಶುವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಪ್ರಾದ್ಯಾಪಕ ವಿವೇಕ ಕಸರಳಿಕರ ಮಾತನಾಡಿ, ಪಶುಗಳ ಉತ್ತಮ ಪೋಷಣೆ ಮತ್ತು ಸ್ವಚ್ಛ ಪರಿಸರವು ಉತ್ಪಾದಕತೆ ಹೆಚ್ಚಿಸುವಲ್ಲಿ ಪ್ರಮುಖ ಅಂಶಗಳಾಗಿವೆ. ಪ್ರಾಣಿ ಹಿಂಸೆ ತಡೆ ಕಾಯ್ದೆಗಳ ಪರಿಣಾಮಕಾರಿ ಜಾರಿಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳು ಸಮಗ್ರವಾಗಿ ಕಾರ್ಯನಿರ್ವಹಿಸಬೇಕು. ಪ್ರಾಣಿ ದಯಾ ಸಂಘಗಳ ಪಾತ್ರ ಮಹತ್ವದ್ದಾಗಿದ್ದು, ಸಾರ್ವಜನಿಕ ಸಹಭಾಗಿತ್ವದ ಮೂಲಕವೇ ದೀರ್ಘಕಾಲೀನ ಫಲಿತಾಂಶ ಸಾಧಿಸಬಹುದು’ ಎಂದರು.

ರಾಯಚೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಂಟಿನಿರ್ದೇಶಕ ಡಾ. ರಮೇಶ ದೊಡ್ಡಮನಿ ಮಾತನಾಡಿ, ಪ್ರಾಣಿ ಕಲ್ಯಾಣ ಮತ್ತು ಪಶುಸಂಗೋಪನೆಯಲ್ಲಿ ಕೊಪ್ಪಳವು ನಂಬರ್ 1 ಜಿಲ್ಲೆಯಾಗಿದೆ. ಹಾಗಾಗಿ ವಿಭಾಗ ಮಟ್ಟದ ಒಂದು ದಿನದ ತಾಂತ್ರಿಕ ಕಾರ್ಯಾಗಾರ ಕೊಪ್ಪಳ ಜಿಲ್ಲೆಯಿಂದಲೆ ಪ್ರಾರಂಭಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಪಶುವೈದ್ಯಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಗ್ರಾಮೀಣ ಭಾಗದ ರೈತರಿಗೆ ಮಾಹಿತಿ ತಲುಪಿಸಲು ಶ್ರಮಿಸಬೇಕು’ ಎಂದರು.

ಪ್ರಶಂಸಾ ಪತ್ರ ವಿತರಣೆ: ಬೀದಿ ನಾಯಿಗಳ ನಿಯಂತ್ರಣದ ಕುರಿತು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ಕಾರ್ಯನಿರ್ವಹಿಸಿ ಶೇ100ರಷ್ಟು ಪ್ರಗತಿ ಸಾಧಿಸಿರುವುದಕ್ಕಾಗಿ ಯಲಬುರ್ಗಾ ಮತ್ತು ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ ಹಾಗೂ ಕಾರಟಗಿ ಪುರಸಭೆಯ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ ಅವರಿಗೆ ಕಾರ್ಯಾಗಾರದಲ್ಲಿ ಪ್ರಶಂಸಾ ಪತ್ರ ವಿತರಿಸಲಾಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ. ನಿರ್ಮಲಾ, ಡಾ. ಎನ್.ಬಿ. ಶ್ರೀಧರ, ರಮೇಶ ಭಜಂತ್ರಿ, ಡಾ. ಪಿ.ಎಂ.ಮಲ್ಲಯ್ಯ, ಡಾ. ಶರಣಬಸಪ್ಪ ರೋಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.