
ಪ್ರಜಾವಾಣಿ ವಾರ್ತೆ
ಕುಷ್ಟಗಿ: ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದ್ದ ನರೇಗಾ ಸೇರಿದಂತೆ ಜನಪರ ಯೋಜನೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೂಲೆಗುಂಪು ಮಾಡುತ್ತಿದ್ದು, ಭವಿಷ್ಯದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಂಚ ಗ್ಯಾರಂಟಿ ಯೋಜನೆಗಳಿಗೂ ಉಳಿಗಾಲವಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ಸಮಾಲೋಚನೆ ಸಭೆಯಲ್ಲಿ ತಮ್ಮ ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ‘ನರೇಗಾ ಯೋಜನೆಗೆ ಜಿ ರಾಮ್ ಜಿ ಎಂದು ನಾಮಕರಣ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಹೆಸರು ಬದಲಾವಣೆ ಮಾಡಿರುವುದಕ್ಕೆ ವಿರೋಧವಿಲ್ಲ. ಆದರೆ ಯೋಜನೆಯ ಸ್ವರೂಪವನ್ನೇ ಬದಲಾಯಿಸಿ ಬಡವರ ಹೊಟ್ಟೆಯ ಮೇಲೆ ಬಂಡೆ ಹೇರಲು ಹೊರಟಿರುವುದಕ್ಕೆ ಕಾಂಗ್ರೆಸ್‌ನ ವಿರೋಧವಿದೆ. ನರೇಗಾ ಯೋಜನೆ ಮೊದಲಿನಂತೆಯೇ ಉಳಿಸಲು ಕಾಂಗ್ರೆಸ್ ರಾಷ್ಟ್ರವ್ಯಾಪಿ ಹೋರಾಟಕ್ಕೆ ಮುಂದಾಗಿದೆ’ ಎಂದರು.
‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ತಲಾ ಆದಾಯದಲ್ಲಿ ಹೆಚ್ಚಾಗಿದೆ. ಅನೇಕ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಅವುಗಳ ಬಗ್ಗೆ ಜನರಿಗೆ ಹೇಗೆ ಮನವರಿಕೆ ಮಾಡಿಕೊಡಬೇಕು ಎಂಬುದರಲ್ಲಿ ಮಾತ್ರ ನಮ್ಮ ಕಾರ್ಯಕರ್ತರಿಗೆ ತರಬೇತಿ ನೀಡುವಲ್ಲಿ ವಿಫಲರಾಗಿದ್ದೇವೆ. ಕಾಂಗ್ರೆಸ್ ಪಕ್ಷ ದೇಶ ಕಟ್ಟುವಲ್ಲಿ ನಿರತವಾಗಿದ್ದರೆ ಬಿಜೆಪಿ ಕೇವಲ ಪಕ್ಷದ ಸಂಘಟನೆಗೆ ಸೀಮಿತವಾಗಿದೆ. ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಮುಖಂಡರು ತಮ್ಮ ಗೆಲುವಿಗೆ ಕಾರಣರಾದವರನ್ನು ಮರೆಯುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ ಮಾತನಾಡಿ, ‘ಚುನಾವಣೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಉತ್ತಮವಾಗಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ಕಾರ್ಯಕರ್ತರು ಹಿಂಜರಿಯುತ್ತಿದ್ದಾರೆ. ಬರುವ ಚುನಾವಣೆಗಳಲ್ಲಿ ನಿಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರ ಪರವಾಗಿ ಕೆಲಸ ಮಾಡಿ ಋಣ ತೀರಿಸಿ’ ಎಂದು ಪರೋಕ್ಷವಾಗಿ ಸಂಸದ ಹಿಟ್ನಾಳ ಅವರನ್ನು ಉದ್ದೇಶಿಸಿ ಹೇಳಿದರು.
ದಿಶಾ ಸಮಿತಿ ಸದಸ್ಯ ದೊಡ್ಡಬಸನಗೌಡ ಬಯ್ಯಾಪುರ, ಮಾಲತಿ ನಾಯಕ, ಲಾಡ್ಲೆಮಷಾಕ್ ಯಲಬುರ್ಗಿ, ವಕೀಲ ಶಂಕರಗೌಡ ಪಾಟೀಲ, ಉಮೇಶ ಮಂಗಳೂರು ಇತರರು ಮಾತನಾಡಿದರು. ಪ್ರಮುಖರಾದ ಬ್ಲಾಕ್ ಅಧ್ಯಕ್ಷ ಕಲ್ಲಪ್ಪ ತಳವಾರ, ಪ್ರಕಾಶ ರಾಠೋಡ, ದೊಡ್ಡಯ್ಯ ಗದ್ದಡಕಿ, ಈರಣ್ಣ ಬದಾಮಿ, ಗೋಪಾಲರಾವ ಕುಲಕರ್ಣಿ, ನಿರ್ಮಲಾ ಕರಡಿ, ಶಕುಂತಲಾ ಹಿರೇಮಠ, ಖೈರುನ್ನಬಿ, ಹಾಲು ಒಕ್ಕೂಟದ ನಿರ್ದೇಶಕ ಕೆ.ಬಿ.ಮಂಜುನಾಥ ಇದ್ದರು.
ಯಂಕಪ್ಪ ಚವ್ಹಾಣ ಸ್ವಾಗತಿಸಿದರು. ಕೇದಾರನಾಥ ನಿರೂಪಿಸಿದರು. ಪಟ್ಟಣ ಸೇರಿದಂತೆ ತಾಲ್ಲೂಕಿನ ಸಾರ್ವಜನಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಸದ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು.
Cut-off box - ಬಿಜೆಪಿ ಟೀಕಿಸಿದ್ದೇ ಸಮಾಲೋಚನೆ ಪಕ್ಷದ ಸಂಘಟನೆ ಕಾರ್ಯಕರ್ತರನ್ನು ಮುಂದಿನ ಚುನಾವಣೆಗಳಿಗೆ ಸಜ್ಜುಗೊಳಿಸುವುದು ಮಾರ್ಗದರ್ಶನ ನೀಡುವುದು ಸೇರಿದಂತೆ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಕಾಂಗ್ರೆಸ್ ಸಮಾಲೋಚನೆ ಸಭೆಯ ಉದ್ದೇಶವಾಗಿತ್ತು. ಆದರೆ ಸಂಸದರು ತಮ್ಮ ಭಾಷವಿಡೀ ಬಿಜೆಪಿಯನ್ನು ಟೀಕಿಸಿದರು. ಮುಖಂಡರು ಸಹ ಸಂಸದ ಹಿಟ್ನಾಳ ಅವರನ್ನು ಹೊಗಳುವುದಕ್ಕೆ ತಮ್ಮ ಭಾಷಣ ಸೀಮಿತಗೊಳಿಸಿದ್ದು ಅಚ್ಚರಿ ಮೂಡಿಸಿತು. ಅಲ್ಲದೆ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.