ADVERTISEMENT

ಭಾಗ್ಯನಗರ ಪ.ಪಂ ಕಾಂಗ್ರೆಸ್ ತೆಕ್ಕೆಗೆ

ಕಾಂಗ್ರೆಸ್‌ ಬೆಂಬಲಿಸಿದ ಬಿಜೆಪಿಯ ಮೂವರು ಸದಸ್ಯರು: ವಿಪ್ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 1:40 IST
Last Updated 7 ನವೆಂಬರ್ 2020, 1:40 IST
ಕೊಪ್ಪಳ ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧಿಕಾರ ಕಾಂಗ್ರೆಸ್ ಕೈವಶವಾಗುತ್ತಿದ್ದಂತೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು
ಕೊಪ್ಪಳ ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧಿಕಾರ ಕಾಂಗ್ರೆಸ್ ಕೈವಶವಾಗುತ್ತಿದ್ದಂತೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು   

ಕೊಪ್ಪಳ: ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹುಲಿಗೆಮ್ಮ ತಟ್ಟಿ, ಉಪಾಧ್ಯಕ್ಷೆಯಾಗಿ ಶೇಖಮ್ಮ ದೇವರಮನಿ ಆಯ್ಕೆಯಾದರು.

ಒಟ್ಟು19 ಸ್ಥಾನಗಳಲ್ಲಿ ಬಿಜೆಪಿ 10, ಕಾಂಗ್ರೆಸ್ 8 ಹಾಗೂ ಒಬ್ಬ ಪಕ್ಷೇತರ ಸದಸ್ಯರು ಇದ್ದರು. ಅಲ್ಲದೆ, ಸಂಸದರ ಮತವೂ ಸೇರಿಕೊಂಡು ಬಿಜೆಪಿ 12 ಸ್ಥಾನಪಡೆದು ಬಹುಮತ ಹೊಂದಿತ್ತು. ಆದರೆ ಕೊನೆ ಗಳಿಗೆಯಲ್ಲಿ ಪಕ್ಷದ ಮೂವರು ಸದಸ್ಯರು ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ ಬೆಂಬಲಿಸಿದರು. ಒಬ್ಬ ಬಿಜೆಪಿ ಸದಸ್ಯ ಗೈರು ಹಾಜರಾಗಿದ್ದರು.

ಬಿಜೆಪಿಯ ಸಾಂಪ್ರದಾಯಿಕ ಮತದಾರರು ಇರುವ ಮತ್ತು ಪಕ್ಷದ ಭದ್ರಕೋಟೆ ಎಂದೇ ಹೆಸರಾಗಿದ್ದ ಭಾಗ್ಯನಗರದಲ್ಲಿ ಬಿಜೆಪಿ ಅಧಿಕಾರ ವಂಚಿತವಾಗಿದ್ದಲ್ಲದೆ ತನ್ನ ಮೂವರು ಸದಸ್ಯರನ್ನು ಹಿಡಿತದಲ್ಲಿ ಇಟ್ಟುಕೊಳ್ಳದೆ ತೀವ್ರ ಮುಖಭಂಗ ಅನುಭವಿಸಿತು. ಸಂಸದ ಸಂಗಣ್ಣ ಕರಡಿ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದರೂ ಗೆಲುವು ಒಲಿದು ಬರಲಿಲ್ಲ.

ADVERTISEMENT

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು ಬಿಜೆಪಿಯಿಂದ ಲಕ್ಷ್ಮಿಬಾಯಿ ನಾಗೂಸಾ ಮೇಘರಾಜ, ದೇವಮ್ಮ ಮಾಲಗತ್ತಿ ನಾಮಪತ್ರ ಸಲ್ಲಿಸಿದ್ದರು. ಬೆಳಿಗ್ಗೆ 11ಕ್ಕೆ ಕಾಂಗ್ರೆಸ್ ಸದಸ್ಯರು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಜತೆಗೆ ಬಂದು ನಾಮಪತ್ರ ಸಲ್ಲಿಸಿದರು.

ಪಟ್ಟಣ ಪಂಚಾಯಿತಿ ಅಧಿಕಾರದ ಗದ್ದುಗೆ ಹಿಡಿಯಲು 11 ಸದಸ್ಯರ ಮ್ಯಾಜಿಕ್ ನಂಬರ್ ಇತ್ತು. ಕಾಂಗ್ರೆಸ್‌ನ 8 ಸದಸ್ಯರ ಜತೆ ಬಿಜೆಪಿಯ ಮೂವರು, ಶಾಸಕರ 1 ಮತವೂ ಇದ್ದುದರಿಂದ ಸಲೀಸಾಗಿ ಅಧಿಕಾರ ಹಿಡಿಯಿತು.

ವಿಜಯೋತ್ಸವ: ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ವಿಜಯೋತ್ಸವ ಆಚರಿಸಿದರು. ಪಕ್ಷದ ಮುಖಂಡರಾದ ಶ್ರೀನಿವಾಸ್ ಗುಪ್ತಾ, ಜಿಲ್ಲಾ ಪಂಚಾಯಿತಿ ಸದಸ್ಯ ಗೂಳಪ್ಪ ಹಲಗೇರಿ, ಅಕ್ಬರ್ ಪಾಶಾ ಪಲ್ಟನ್ ಮುಂತಾದವರು
ಇದ್ದರು.

ಪಟ್ಟಣ ಪಂಚಾಯಿತಿ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸ
ಲಾಗಿತ್ತು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಜಿ.ಬಿಮಜ್ಜಗಿ ಕಾರ್ಯ ನಿರ್ವಹಿಸಿದರು.

ವಿಪ್‌ ಉಲ್ಲಂಘಿಸಿದವರ ವಿರುದ್ಧ ಕ್ರಮ: ‘ಪಕ್ಷದ ಆದೇಶ ಉಲ್ಲಂಘಿಸಿ ಕಾಂಗ್ರೆಸ್ ಬೆಂಬಲಿಸಿದ ಸದಸ್ಯರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಸದ ಸಂಗಣ್ಣ ಕರಡಿ ಪ್ರತಿಕ್ರಿಯಿಸಿದರು.

‘ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ನಮ್ಮ ಪಕ್ಷಕ್ಕೆ ಬಹುಮತವಿತ್ತು. ಮೂವರು ಸದಸ್ಯರು ವಿಪ್‌ ಆದೇಶ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿಗಳು ಸೋಲಬೇಕಾಯಿತು’ ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ‘ಭಾಗ್ಯನಗರದ ಅಭಿವೃದ್ಧಿಗೆ ನಮ್ಮ ಪಕ್ಷದ ಸದಸ್ಯರನ್ನು ಬೆಂಬಲಿಸಿದ ಎಲ್ಲರಿಗೂ ಅಭಿನಂದನೆ. ಪಕ್ಷಾತೀತವಾಗಿ ಅಭಿವೃದ್ಧಿಯತ್ತ ಗಮನ ಹರಿಸಲಾಗುವುದು. ಈ ನಿಟ್ಟಿನಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಮಾರ್ಗದರ್ಶನ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.