
ಗಂಗಾವತಿ: ‘ಪ್ರಜಾಪ್ರಭುತ್ವದ ಆತ್ಮ ಸಂವಿಧಾನ. ಇದನ್ನು ನಂಬಿ ಎಲ್ಲರೂ ಜೀವನ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಡಳಿತದಲ್ಲಿ ಇದಕ್ಕೆ ಮೌಲ್ಯ ಇಲ್ಲದಂತಾಗಿದೆ. ರಾಜ್ಯದಲ್ಲಿ ಸಂವಿಧಾನಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ’ ಎಂದು ಶಾಸಕ ಜಿ. ಜನಾರ್ದನರೆಡ್ಡಿ ಹೇಳಿದರು.
ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈಚೆಗೆ ಬಳ್ಳಾರಿಯಲ್ಲಿ ನನ್ನ ಮತ್ತು ಮನೆ ಮೇಲೆ ಫೈರಿಂಗ್ ಮಾಡುವ ಜೊತೆ ಗುಂಡಾಗಿರಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ವೈಷಮ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಬಳ್ಳಾರಿಯಲ್ಲಿ ಗಂಗಾವತಿ ಶಾಸಕನ ಮೇಲೆ ಕಾಂಗ್ರೆಸ್ ಶಾಸಕ ಮತ್ತು ಅವರ ಬೆಂಬಲಿಗರು ದಾಳಿ ನಡೆಸಿದರು ಈವರೆಗೆ ಕ್ರಮವಾಗಿಲ್ಲ’ ಎಂದರು.
ಗುಂಡಾಗಿರಿ ಮತ್ತು ಫೈರಿಂಗ್ ಕುರಿತು ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಕೇಳಿದರೇ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ಇರಾನ್, ಅಮೇರಿಕಾದಿಂದ ಸೈನ್ಯವನ್ನು ನಿಯೋಜಿಸಿಕೊಳ್ಳುವಂತೆ ತಿಳಿಸುತ್ತಾರೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲವೆಂದರೇ ಜನ ಸಾಮಾನ್ಯರ ಪರಿಸ್ಥಿತಿ ಏನೂ? ಎಂದು ಟೀಕಿಸಿದರು.
‘ಸಾಣಾಪುರ ಗ್ರಾಮದ ತುಂಗಾಭದ್ರ ನದಿ ತಟದಲ್ಲಿ ನಡೆದ ಮಹಿಳೆ ಮೇಲಿನ ಅತ್ಯಾಚಾರ, ಓರ್ವ ವ್ಯಕ್ತಿಯ ಕೊಲೆಯನ್ನು ಸಂಸದರು ಸಣ್ಣ ಘಟನೆ ಎಂದಿದ್ದಾರೆ. ಇದು ಎಂಥ ವಿಪರ್ಯಾಸ. ಘಟನೆಯಿಂದ ಜೀವ ಹೋಗಿದೆ. ಹೀಗಿದ್ದಾಗ ಸಣ್ಣ ಘಟನೆ ಎನ್ನಲು ಸಂಸದರಿಗೆ ಮಾತಾದರೂ ಹೇಗೆ ಬಂತು ಎಂದು ಪ್ರಶ್ನಿಸಿದರು.
ತಹಶೀಲ್ದಾರ್ ಯು.ನಾಗರಾಜ ಧ್ವಜಾರೋಹಣ ನೆರವೇರಿಸಿದರು.
ಪೊಲೀಸ್, ಗೃಹರಕ್ಷದಳ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ಸೇರಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪರೇಡ್ ಜರುಗಿತು. ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಿತು.
ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಪಾಟೀಲ, ಡಿವೈಎಸ್‌ಪಿ ನ್ಯಾಮನಗೌಡರ, ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಲಿ ಯಾಸ್ ಖಾದ್ರಿ, ಬಿಇಒ ನಟೇಶ, ಇಒ ರಾಮರೆಡ್ಡಿ ಪಾಟೀಲ, ಸಿಡಿಪಿಒ ಜಯಶ್ರೀ ಸೇರಿ ವಿವಿಧ ಅಧಿಕಾರಿಗಳು ಇದ್ದರು.
‘ಜನರ ಕ್ಷೇಮವೇ ನನ್ನ ಅಭಿವೃದ್ಧಿ’
ಗಂಗಾವತಿ: ‘ಶಾಸಕನಾದ ನಂತರ ಹಲವು ಅಭಿವೃದ್ಧಿ ಕೆಲಸಗಳು ಮಾಡುತ್ತಿದ್ದು ಗಂಗಾವತಿ ಜನರ ಕ್ಷೇಮವೇ ನನ್ನ ಅಭಿವೃದ್ಧಿ’ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು. ಕ್ಷೇತ್ರದ ಅಭಿವೃದ್ಧಿ ಭಾಗವಾಗಿ ಕನಕಗಿರಿ ರಸ್ತೆಯಲ್ಲಿನ 5 ಎಕರೆ ಜಮೀನಿನಲ್ಲಿ ಕೆಕೆಆರ್‌ಡಿಬಿ ಅನುದಾನದಡಿ ಹೈಟೆಕ್ ಸ್ಯಾಟಿಲೈಟ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಹಾಗೇ ₹25 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣ ₹35 ಕೋಟಿ ಅನುದಾನದಲ್ಲಿ ನಗರದ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು. ₹6 ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಬೈಪಾಸ್ ರಸ್ತೆ ಅಭಿವೃದ್ಧಿ ₹6 ಕೋಟಿ ವೆಚ್ಚದಲ್ಲಿ ಮಹಿಳಾ ಆಸ್ಪತ್ರೆ ಅಭಿವೃದ್ಧಿ ₹25 ಕೋಟಿ ವೆಚ್ಚದಲ್ಲಿ ಇರಕಲ್ ಗಡ ಹೋಬಳಿಯಲ್ಲಿ ಅಂಬೇಡ್ಕರ್ ವಸತಿ ನಿಲಯ ನಿರ್ಮಾಣಕ್ಕೆ ಭೂಮಿಪೂಜೆ ₹120 ಕೋಟಿ ವೆಚ್ಚದಲ್ಲಿ ಇರಕಲಗಡ ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಯೋಜನೆ ಕಲ್ಪಿಸುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.