ಕುಷ್ಟಗಿ: ‘ಕ್ಷೇತ್ರದಲ್ಲಿರುವವರು ಜವಾಬ್ದಾರಿ, ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಅಳವಡಿಸಿಕೊಂಡಾಗ ಮಾತ್ರ ಸಹಕಾರ ಚಳವಳಿಗೆ ಕಳಂಕ ಬರುವುದಿಲ್ಲ’ ಎಂದು ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ರಾಜ್ಯ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೊಪ್ಪಳ ಜಿಲ್ಲೆಯ ಸೌಹಾರ್ದ ಸಹಕಾರ ಕ್ಷೇತ್ರದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಕಾನೂನಿನ ಚೌಕಟ್ಟು, ಬೈ–ಲಾ ನಿಯಮ ಪಾಲಿಸಿ, ಗೌರವಿಸಿ ಸಕಾರಾತ್ಮಕ ಚಿಂತನೆಗಳನ್ನು ಒಳಗೊಂಡರೆ ಮಾತ್ರ ಸೌಹಾರ್ದ ಸಂಸ್ಥೆಗಳ ಸ್ವಯಂ ಆಡಳಿತ ನಿಯಂತ್ರಣ, ಸ್ವಾಯತ್ತತೆಗೆ ಧಕ್ಕೆ ಬರುವುದಿಲ್ಲ. ಅಧಿಕಾರಿಗಳ ಹಸ್ತಕ್ಷೇಪವೂ ಇರುವುದಿಲ್ಲ’ ಎಂದರು.
‘ಉನ್ನತ ಧ್ಯೇಯ ಹೊಂದಿರುವ ಸಹಕಾರ ಸಂಸ್ಥೆಗಳು ಜನರಿಂದ ಹುಟ್ಟಿಕೊಂಡಿವೆ. ಈ ಚಳವಳಿಯನ್ನು ಗಂಭೀರವಾಗಿ ಅರ್ಥೈಸಿಕೊಂಡು ಜನರ, ಗ್ರಾಹಕರ ಠೇವಣಿ ಹಣವನ್ನು ಜವಾಬ್ದಾರಿಯಿಂದ ಕಾಯ್ದಿಟ್ಟುಕೊಂಡು, ಭದ್ರತೆ, ಭರವಸೆ ಒದಗಿಸಿದರೆ ಸಹಕಾರ ವ್ಯವಸ್ಥೆಯನ್ನು ಬಹುದಿನಗಳವರೆಗೂ ಮುಂದುವರಿಸಿಕೊಂಡು ಹೋಗಲು ಸಾಧ್ಯ. ಆದರೆ ಕೆಲವರು ಠೇವಣಿಯನ್ನು ಮನಸ್ಸಿಗೆ ಬಂದಂತೆ ಬಳಸುವುದು, ವೈಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ಅದನ್ನು ಬೇರೆ ಕಡೆ ಹೂಡಿಕೆ ಮಾಡುವುದು ದುರ್ಬಳಕೆ ಎನಿಸುತ್ತದೆ’ ಎಂದರು.
‘ಹೆಚ್ಚು ಹೆಚ್ಚು ತಪ್ಪು ಮಾಡುವುದನ್ನೇ ಅಧಿಕಾರಿಗಳು ಕಾಯುತ್ತಿರುತ್ತಾರೆ. ಸ್ವಯಂ ನಿಯಂತ್ರಣದಿಂದ ದೂರ ಸರಿಯಬೇಕಾಗುತ್ತದೆ ಎಂಬುದನ್ನು ಸಹಕಾರ ಸಂಸ್ಥೆಗಳ ನಿರ್ದೇಶಕರು, ಸಿಇಒಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಸರ್ಕಾರ ಕಾಯ್ದೆಗೆ ಮಹತ್ವದ ತಿದ್ದುಪಡಿಗಳನ್ನು ತರುವ ಚಿಂತನೆ ನಡೆಸಿದ್ದು ತಪ್ಪು ಮಾಡುವವರು ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಇರಬೇಕು’ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ, ಸೂರ್ಯಕಾಂತ ಇತರರು ಮಾತನಾಡಿದರು. ರಾಜ್ಯ ಸೌರ್ಹಾರ್ದ ಸಂಯುಕ್ತ ಸಹಕಾರ ಸಂಸ್ಥೆ ನಿರ್ದೇಶಕ ಜಿ.ಶ್ರೀಧರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಒಕ್ಕೂಟದ ಅಧ್ಯಕ್ಷ ಚನ್ನಬಸಪ್ಪ ಕಡ್ಡಿಪುಡಿ, ಉಪಾಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ಪ್ರಮುಖರಾದ ವಿಶ್ವನಾಥ ಕನ್ನೂರು, ಬಸವರಾಜ ಪಡಿ, ಶಂಕರಗೌಡ ಹಿರೇಗೌಡ, ವಿರುಪಾಕ್ಷಪ್ಪ ಮಾನ್ವಿ, ಶರಣಬಸವ ಚನ್ನಳ್ಳಿ, ಕುಮಾರೆಪ್ಪ ಸಿಂಗನಾಳ, ಎಂ.ಬಸವರಾಜ ಇತರರು ಇದ್ದರು.
ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಓಂಕಾರ ನಿರೂಪಿಸಿದರು. ಜಿಲ್ಲೆಯ ಸೌಹಾರ್ದ ಸಂಯುಕ್ತ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.
ಸಹಕಾರ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಪ್ರಾಮಾಣಿಕತೆ ಇರುವುದು ಅವಶ್ಯ ಸಂಸ್ಥೆಗಳೂ ಬೆಳೆಯಬೇಕು ಮತ್ತು ಸದಸ್ಯರ ಅಭಿವೃದ್ಧಿಗೂ ಕಾಳಜಿ ವಹಿಸಬೇಕು ಎಂದರು.ದೇವೇಂದ್ರಪ್ಪ ಬಳೂಟಗಿ ಪ್ರಗತಿಪರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.