ADVERTISEMENT

ಹಸಿರು ವಲಯದಲ್ಲಿ ಆತಂಕ: 50 ಜನರ ಕ್ವಾರೈಂಟೈನ್

ಲಾಕ್‌ಡೌನ್ ಸರಳ: ವಲಸಿಗರ ಮೇಲೆ ಹದ್ದಿನ ಕಣ್ಣು

ಸಿದ್ದನಗೌಡ ಪಾಟೀಲ
Published 8 ಮೇ 2020, 2:30 IST
Last Updated 8 ಮೇ 2020, 2:30 IST
ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಟೋಲ್ ಬಳಿ ವಲಸೆ ಕಾರ್ಮಿಕರು ನಸುಕಿನ ಜಾವವೇ ನೂರಾರು ಸಂಖ್ಯೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂತು
ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಟೋಲ್ ಬಳಿ ವಲಸೆ ಕಾರ್ಮಿಕರು ನಸುಕಿನ ಜಾವವೇ ನೂರಾರು ಸಂಖ್ಯೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂತು   

ಕೊಪ್ಪಳ: ಜಿಲ್ಲೆ ಯಾವುದೇ ಕರೋನಾ ಪೋಸಿಟಿವ್ ಪ್ರಕರಣ ದಾಖಲಾಗಿದೆ ಹಸಿರು ವಲಯ ಎಂದು ಘೋಷಿಸಿದ್ದರೂ ಹೋಗಿ, ಬರುವ ಜನರಿಂದ ಆತಂಕ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯ ಚೆಕ್‌ ಪೋಸ್ಟ್‌ಗಳನ್ನು ತಪ್ಪಿಸಿ ಒಳ ಮಾರ್ಗದ ಮೂಲಕ ಜಿಲ್ಲೆಗೆ ಬರುವ ಜನರು ಒಂದೆಡೆಯಾದರೆ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುತ್ತಿದ್ದಾರೆ.

ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿ ಹಗಲು ರಾತ್ರಿ ಕಾಯುತ್ತಿದ್ದರೂ ಮಾತ್ರ ಆತಂಕ ಕಡಿಮೆಯಾಗುತ್ತಿಲ್ಲ. ಜಿಲ್ಲೆಗೆ ಯಾರೇ ಬಂದರು ಜನತೆಯೇ ಆಶಾ, ಅಂಗನವಾಡಿ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದರಿಂದ ಆರೋಗ್ಯ ಇಲಾಖೆ ಒತ್ತಡ ಕಡಿಮೆ ಮಾಡಿದೆ. ಅವರನ್ನು ಸಮಗ್ರ ಪರೀಕ್ಷೆ ಮಾಡಿಸಿ, ಶಂಕಿತರು ಕಂಡು ಬಂದರೆ ಕ್ವಾರೈಂಟೈನ್‌ಗೆ ಒಳಪಡಿಸಲಾಗುತ್ತದೆ.

ಕುಷ್ಟಗಿ ತಾಲ್ಲೂಕಿನ ಹನಮನಾಳ, ಯಲಬುರ್ಗಾ ಗಡಿಭಾಗದ ಗಜೇಂದ್ರಗಡ, ಅಳವಂಡಿ ಸಮೀಪದ ಮುಂಡರಗಿ, ಹೊಸಪೇಟೆಗೆ ವಿವಿಧ ಮಾರ್ಗದ ಮೂಲಕ ಜನ ಬರುವ ಹೋಗುವುದು ಹೆಚ್ಚಾಗಿದೆ. ಅಕ್ರಮವಾಗಿ ಬಂದವರ ವಾಹನವನ್ನು ವಶಪಡಿಸಿಕೊಂಡು ದಂಡ ವಿಧಿಸಿ ಪ್ರಕರಣ ಕೂಡಾ ದಾಖಲಿಸಲಾಗಿದೆ. ಈ ಮಾರ್ಗಗಳು ಹೈ ಟೆನ್ಶನ್ ಉಂಟು ಮಾಡಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ADVERTISEMENT

50 ಜನರ ಕ್ವಾರೈಂಟೈನ್

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಢಾಣಕ ಶಿರೂರು ಗ್ರಾಮದ 13 ಜನರಿಗೆ ಸೋಂಕು ದೃಢಪಟ್ಟಿದ್ದು, ತೀವ್ರ ಆತಂಕ ಮೂಡಿಸಿದೆ. ಈ ಭಾಗದ ಜನರ ಜೊತೆ ಕೊಪ್ಪಳ ಜಿಲ್ಲೆಯ ಜನರ ನಂಟು ಹೆಚ್ಚಿಗೆ ಇದೆ. ಸೋಂಕಿತ ವ್ಯಕ್ತಿಗಳ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕವಿದೆ ಎಂಬ ಆಧಾರದ ಮೇಲೆ ನಿಲೋಗಲ್ಲ ಗ್ರಾಮದ15 ಜನರು ಸೇರಿದಂತೆ 50 ಜನರ ಕ್ವಾರೈಂಟನ್ ಮಾಡಲಾಗಿದೆ.

ದೈಹಿಕ ಅಂತರ, ವೈಯಕ್ತಿಕ ಸ್ವಚ್ಛತೆ, ಜಾಗೃತಿ ನಡುವೆಯೂ ಕೆಲವೊಂದು ಆತಂಕಕಾರಿ ಬೆಳವಣಿಗೆ ನಡೆಯುತ್ತಿದ್ದು, ಜನತೆ ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡಬಾರದು ಎಂದು ಜಿಲ್ಲಾಡಳಿತ ಪದೇ, ಪದೇ ಹೇಳುತ್ತಿದೆ. ಪಕ್ಕದ ಜಿಲ್ಲೆಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿದ್ದು, ಜನರ ಓಡಾಟ ಸುಲಭವಾಗಿದ್ದರಿಂದ ಜಿಲ್ಲೆಗೆ ಆತಂಕ ಮಾತ್ರ ತಪ್ಪಿಲ್ಲ.

ಕೊಪ್ಪಳ ಜಿಲ್ಲೆಯಾದ್ಯಂತ ಸಹಜ ಸ್ಥಿತಿಯಲ್ಲಿದ್ದರೂ ಹೊರಗಿನಿಂದ ಬಂದವರ ಮೇಲೆ ಆತಂಕ ಹೆಚ್ಚಾಗಿದೆ. ಹೀಗಾಗಿ ಆಡಳಿತ ವ್ಯವಸ್ಥೆ ಹದ್ದಿನ ಕಣ್ಣು ಇಟ್ಟಿದೆ. ಜಿಲ್ಲೆಗೆ ಬಂದವರ ಗಂಟಲು ದ್ರವ ಮಾದರಿ ಸಂಗ್ರಹ ಸೇರಿದಂತೆ ವಿವಿಧ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವರದಿ ಬರುವವರು ಹೋಂ ಕ್ವಾರೈಂಟೈನ್ ಕೂಡಾ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.