ADVERTISEMENT

ಭ್ರಷ್ಟಾಚಾರ ಲೋಕಾಯುಕ್ತರಿಗೆ ದೂರು: ಭಾಗ್ಯವತಿ

ಬಹು ಗ್ರಾಮ ಕುಡಿಯುವ ನೀರಿನ ಯೋಜನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:45 IST
Last Updated 24 ನವೆಂಬರ್ 2020, 16:45 IST
ಕನಕಗಿರಿ ಸಮೀಪದ ಅಡವಿಬಾವಿ ದೊಡ್ಡತಾಂಡದ ಮಿನಿವಾಟರ್ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಮಾಣಿಕ ಭೋಲಾ ಮಂಗಳವಾರ ಪರಿಶೀಲಿಸಿದರು
ಕನಕಗಿರಿ ಸಮೀಪದ ಅಡವಿಬಾವಿ ದೊಡ್ಡತಾಂಡದ ಮಿನಿವಾಟರ್ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಮಾಣಿಕ ಭೋಲಾ ಮಂಗಳವಾರ ಪರಿಶೀಲಿಸಿದರು   

ಕನಕಗಿರಿ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕ ಮಾದಿನಾಳ ಹಾಗೂ 11 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ತನಿಖೆಗೆ ಒತ್ತಾಯಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಮಾಣಿಕ ಭೋಲಾ ಹೇಳಿದರು.

ಸಮೀಪದ ಅಡವಿಬಾವಿ ದೊಡ್ಡತಾಂಡ, ಹುಲಸನಹಟ್ಟಿ, ಇಂಗಳದಾಳ, ನಾಗಲಾಪುರ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ವಾಟರ್ ಟ್ಯಾಂಕ್ ಕಾಮಗಾರಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ಚಿಕ್ಕ ಮಾದಿನಾಳ ಸೇರಿದಂತೆ 11 ಗ್ರಾಮಗಳಿಗೆ ಪೈಪ್‌ಲೈನ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರ 2010ರಲ್ಲಿ ₹10. 29 ಕೋಟಿ ಅನುದಾನ ಮಂಜೂರು ಮಾಡಿತ್ತು. ಕಾಮಗಾರಿ ಆರಂಭವಾಗಿದ್ದು, ಇಲ್ಲಿಯವರೆಗೆ ಯಾವ ಗ್ರಾಮಗಳಿಗೂ ಕುಡಿಯುವ ನೀರು ಪೊರೈಕೆಯಾಗಿಲ್ಲ.

ADVERTISEMENT

ವಾಟರ್ ಟ್ಯಾಂಕ್ ಹಾಗೂ ಪೈಪ್‌ಲೈನ್‌ ಕಾಮಗಾರಿಗೆ ₹6.51 ಕೋಟಿ ಬಳಕೆ ಮಾಡಲಾಗಿದೆ. ಗುಣಮಟ್ಟದ ಸಾಮಗ್ರಿ ಬಳಸದ ಪರಿಣಾಮ ವಾಟರ್ ಟ್ಯಾಂಕ್ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಕುರಿತು ಯೋಚಿಸದೆ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ವೆಂಕಟಗಿರಿ ಗ್ರಾಮದ ವ್ಯಾಪ್ತಿಯಲ್ಲಿ ಹೊಸ ಕೆರೆ ನಿರ್ಮಾಣ ಮಾಡಿ ತುಂಗಾಭದ್ರ ಎಡದಂಡೆ ಕಾಲುವೆಯ ನೀರನ್ನು ಸಂಗ್ರಹಿಸಿ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡಬೇಕೆಂಬುದು ಯೋಜನೆಯ ಅಂದಾಜು ಪ್ರತಿಯಲ್ಲಿದೆ ಗುತ್ತಿಗೆದಾರರು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿ ಬರೀ ನೀರಿನ ಟ್ಯಾಂಕ್ ಹಾಗೂ ಪೈಪ್‌ಲೈನ್‌ ಕೆಲಸ ಮಾಡಿ ಹಣ ಎತ್ತುವಳಿ ಮಾಡಿದ್ದಾರೆ. ಕೆರೆ ಕಾಮಗಾರಿ ಇಲ್ಲಿವರೆಗೂ ಆರಂಭಿಸಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮವ್ವ ನೀರಲೂಟಿ, ,ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ ಹಾಗೂ ಮುಖಂಡ ಸಿದ್ದಪ್ಪ ನೀರಲೂಟಿ ಇದ್ದರು. ಜಿಲ್ಲಾ ಪಂಚಾಯಿತಿಯ ಕುಡಿಯುವ ನೀರಿನ ಯೋಜನೆಯ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.