ADVERTISEMENT

ಮಾರ್ಗಸೂಚಿ ಪಾಲಿಸಿ, ಜಾಗೃತಿ ಮೂಡಿಸಿ

ಹನುಮ ಮಾಲಾಧಾರಿಗಳಿಂದ ಮಾಸ್ಕ್‌, ತಂಪು ಪಾನೀಯ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:45 IST
Last Updated 21 ಏಪ್ರಿಲ್ 2021, 16:45 IST
ಗಂಗಾವತಿ ಬಸ್ ನಿಲ್ದಾಣದಲ್ಲಿ ಬುಧವಾರ ಹನುಮ ಮಾಲಾಧಾರಿಗಳು ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಮಾಸ್ಕ್ ವಿತರಿಸಿದರು
ಗಂಗಾವತಿ ಬಸ್ ನಿಲ್ದಾಣದಲ್ಲಿ ಬುಧವಾರ ಹನುಮ ಮಾಲಾಧಾರಿಗಳು ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಮಾಸ್ಕ್ ವಿತರಿಸಿದರು   

ಗಂಗಾವತಿ: ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಹನುಮ ಮಾಲಾಧಾರಿಗಳು ರಾಮನವಮಿ ಪ್ರಯುಕ್ತ ಸಾರ್ವಜನಿಕರಿಗೆ ಬುಧವಾರ ಮಾಸ್ಕ್ ವಿತರಿಸಿದರು. ಕೋವಿಡ್‌ ಜಾಗೃತಿ ಮೂಡಿಸಿದರು.

ಹಿಂದೂ ಜಾಗರಣ ವೇದಿಕೆಯ ಸಹ ಸಂಚಾಲಕ ಅಯ್ಯನಗೌಡ ಹೇರೂರು ಮಾತನಾಡಿ,‘ದೇಶದಲ್ಲಿ ಸಾಕಷ್ಟು ಜನರು ಕೋವಿಡ್‌ಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಎಲ್ಲರೂ ಅಂತರ ಕಾಯ್ದುಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಹನುಮ ಮಾಲಾಧಾರಿಗಳು ಈ ದಿನದಿಂದ ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಸುತ್ತಮುತ್ತಲಿನ ಜನರಿಗೆ ಕೋವಿಡ್‌ 2ನೇ ಅಲೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ’ ಎಂದರು.

ನಂತರ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಅರಿಕೇರಿ ಮಾತನಾಡಿ,‘ನಾಡಿನಲ್ಲಿ ಗಣ್ಯಾತೀಗಣ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಜತೆಗೆ ಗ್ರಾಮೀಣ ಭಾಗದಲ್ಲೂ ಕೊರೊನಾ ಅಲೆ ಜೋರಾಗಿದೆ’ ಎಂದರು.

ADVERTISEMENT

ಇದಕ್ಕೂ ಮುನ್ನ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಶ್ರೀರಾಮಚಂದ್ರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಸಾರ್ವಜನಿಕರಿಗೆ ತಂಪು ಪಾನೀಯ ವಿತರಣೆ ಮಾಡಿದರು.

ನಗರದ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ, ಹನುಮಮಾಲಾಧಾರಿಗಳು, ಬಸ್‌ ನಿಲ್ದಾಣದ ಮುಂಭಾಗದ ಅಂಗಡಿಗಳು, ಹೋಟೆಲ್‍ಗಳು, ಬಸ್ ಚಾಲಕರು, ನಿರ್ವಾಹಕರಿಗೆ, ವಾಹನ ಸವಾರರಿಗೆ ಮಾಸ್ಕ್‌ ವಿತರಿಸಿದರು.

ಹನುಮಮಾಲಾಧಾರಿಗಳಾದ ತಾತಯ್ಯ ಗುರುಸ್ವಾಮಿ, ಜಗದೀಶ ಹೇರೂರು, ಪ್ರಶಾಂತ ಚಿತ್ರಗಾರ, ಕೃಷ್ಣ, ವಿನಾಯಕ, ಸತೀಶ, ಶಶಿ, ನವೀನ, ರವಿ ತಿಮ್ಮಾಪೂರ, ಪ್ರೀತಮ, ಗೋವಿಂದ, ಹನುಮೇಶ, ಅಮರೇಶ ಹಾಗೂ ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.