ADVERTISEMENT

ಗವಿಸಿದ್ಧೇಶ್ವರ ಜಾತ್ರೆ| ಮೂರು ದಿನ ದಾಸೋಹ, ಸೀಮಿತ ಭಕ್ತರಿಗೆ ಅವಕಾಶ

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ: ಕೊರೊನಾ ಹಿನ್ನೆಲೆಯಲ್ಲಿ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 2:51 IST
Last Updated 16 ಜನವರಿ 2021, 2:51 IST
ಜ.30ರಂದು ನಡೆಯುವ ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಠದ ಮೈದಾನದಲ್ಲಿನ ತೇರು ಹೊರ ತೆಗೆಯಲಾಗಿದ್ದು, ರಥದ ಅಲಂಕಾರಕ್ಕೆ ಸಿದ್ಧತೆ ನಡೆಸಲಾಗುತ್ತದೆ
ಜ.30ರಂದು ನಡೆಯುವ ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಠದ ಮೈದಾನದಲ್ಲಿನ ತೇರು ಹೊರ ತೆಗೆಯಲಾಗಿದ್ದು, ರಥದ ಅಲಂಕಾರಕ್ಕೆ ಸಿದ್ಧತೆ ನಡೆಸಲಾಗುತ್ತದೆ   

ಕೊಪ್ಪಳ:ಶತಮಾನಗಳಿಂದ ನಡೆದುಕೊಂಡು ಬಂದ ಗವಿಮಠದ ಗವಿಸಿದ್ಧೇಶ್ವರ ಜಾತ್ರೆಯನ್ನು ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಆದೇಶ, ಸಂಪ್ರದಾಯದ ಚೌಕಟ್ಟಿನಲ್ಲಿಧಾರ್ಮಿಕ ವಿಧಿ ವಿಧಾನದೊಂದಿಗೆ ಆಚರಿಸಲಾಗುವುದು ಶ್ರೀಮಠದ ಆಡಳಿತ ಮಂಡಳಿ ತಿಳಿಸಿದೆ.

ಗವಿಮಠದ ಭಕ್ತರು,ಜಿಲ್ಲಾಡಳಿತ, ಜನಪ್ರತಿನಿಧಿಗಳೊಂದಿಗೆ ಮಠದ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಚರ್ಚಿಸಿ ನಿರ್ಣಯತೆಗೆದುಕೊಂಡಿದ್ದಾರೆ.ಪ್ರತಿ ವರ್ಷ ಜಾತ್ರೆಯ ಅಂಗವಾಗಿ ಸಾಮಾಜಿಕ ಕಳಕಳಿಯಡಿ ನಡೆಯುವ ವಿದ್ಯಾರ್ಥಿ ಜಾಥಾ, ಗುಡ್ಡದಲ್ಲಿ ಹಾಗೂ ಕೆರೆಯ ದಡದಲ್ಲಿ ಬಹಳ ಜನ ಒಂದೆ ಕಡೆ ಸೇರುವುದರಿಂದ ತೆಪ್ಪೋತ್ಸವ ಕಾರ್ಯಕ್ರಮ ಸಹ ಇರುವುದಿಲ್ಲ.

'ಜ.30ರಂದು ಶನಿವಾರ ಜರುಗುವ ಮಹಾರಥೋತ್ಸವ ಪ್ರತಿ ವರ್ಷದಂತೆ ಲಕ್ಷಾಂತರ ಭಕ್ತ ಜನರ ಮಧ್ಯದಲ್ಲಿ ಜರುಗುವುದಿಲ್ಲ. ಜಾತ್ರಾ ಮೈದಾನದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ, ಪುರಿ ಜಗನ್ನಾಥ ರಥೋತ್ಸವ, ಮೈಸೂರ ದಸರಾ ಜಂಬೂಸವಾರಿ ರೀತಿಯಲ್ಲಿ ಕೇವಲ ಸಾಂಪ್ರದಾಯಿಕವಾಗಿ ರಥೋತ್ಸವವನ್ನು ಸರಳವಾಗಿ ಆಚರಿಸಲಾಗುವುದು' ಸ್ವಾಮೀಜಿ ಪತ್ರಿಕೆಗೆ ತಿಳಿಸಿದ್ದಾರೆ.

ADVERTISEMENT

ಕೈಲಾಸ ಮಂಟಪದ ವೇದಿಕೆಯಲ್ಲಿ ಜರುಗುವ ಧಾರ್ಮಿಕ ಗೋಷ್ಠಿ, ಭಕ್ತ ಹಿತ ಚಿಂತನಾ ಸಭೆ, ಅನುಭಾವಿಗಳ ಅಮೃತಗೋಷ್ಠಿ, ಸಂಗೀತ, ಸಾಹಿತ್ಯ, ಹಾಸ್ಯ, ಸಾಧಕರ ಸನ್ಮಾನ ಕಾರ್ಯಕ್ರಮ ರದ್ದು ಮಾಡಲಾಗಿದೆ.

'ಜ.31ರಂದು ಚಿಕ್ಕೇನಕೊಪ್ಪದ ಚನ್ನವೀರಶರಣರ ದೀರ್ಘದಂಡ ನಮಸ್ಕಾರ ಮಾತ್ರ ಇರುತ್ತದೆ.ಸ್ವಾಮೀಜಿಯೊಂದಿಗೆ ಸಾವಿರಾರುಭಕ್ತರಿಗೆ ದೀರ್ಘದಂಡ ನಮಸ್ಕಾರ ಹಾಕಲು ಅನುಮತಿ ಇರುವುದಿಲ್ಲ. ಇದಕ್ಕೆ ಭಕ್ತರು ಸಹಕರಿಸಬೇಕು. ಶರಣರು ಧೀರ್ಘದಂಡ ನಮಸ್ಕಾರ ಹಾಕುವ ದಿನ ಹೊರತು ಪಡಿಸಿ ತಮಗೆ ಅನುಕೂಲವಾದ ಸಮಯ ಅಥವಾ ದಿನದಂದು ತಮ್ಮ ಹರಕೆ ಅಥವಾ ಸಂಕಲ್ಪಗಳನ್ನು ಪೂರೈಸಿಸಬಹುದು'ಎಂದು ಮಠದ ಪೀಠಾಧಿಪತಿಗವಿಶ್ರೀ ಮನವಿ ಮಾಡಿದ್ದಾರೆ.

ಜ.31 ರಂದು ಸಿದ್ಧೇಶ್ವರ ಮೂರ್ತಿಯ ಮೆರವಣಿಗೆ ನಂತರ ನಡೆಯುವ ಮದ್ದು ಸುಡುವ ಕಾರ್ಯಕ್ರಮ ನಡೆಯುವದಿಲ್ಲ. ಪ್ರತಿ ವರ್ಷದಂತೆ 15-20 ದಿವಸ ನಡೆಯುವ ಮಹಾದಾಸೋಹ ಇರುವುದಿಲ್ಲ. ಶ್ರೀಮಠಕ್ಕೆ ಬರುವ ಭಕ್ತರಿಗೆ ಅನಾನುಕೂಲವಾಗದಿರಲೆಂದು ಈ ವರ್ಷ ಕೇವಲ ಜ.30,31 ಮತ್ತು ಫೆಬ್ರುವರಿ 1ರವರೆಗೆ ದಾಸೋಹ ಇರುತ್ತದೆ. ಭಕ್ತರು ಯಾರು ರೊಟ್ಟಿ ಹಾಗೂ ಸಿಹಿ ಪದಾರ್ಥ ತರಬಾರದು, ಅವುಗಳನ್ನು ಮಹಾದಾಸೋಹದಲ್ಲಿ ಸ್ವೀಕರಿಸುವುದಿಲ್ಲ.ದಾಸೋಹದಲ್ಲಿ ಕೇವಲ ದವಸ-ಧಾನ್ಯ, ಕಾಯಿಪಲ್ಲೆ ಮಾತ್ರ ಸ್ವೀಕರಿಲಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.

ಜಾತ್ರಾ ಮಹೋತ್ಸವದಲ್ಲಿ ವಿವಿಧ ತರೇವಾರಿ ಅಂಗಡಿ, ಅಮ್ಯೂಜ್ಮೆಂಟ್ ಪಾರ್ಕ್, ಮಿಠಾಯಿ, ಹೊಟೇಲ್, ಸ್ಟೇಷನರಿ ಅಂಗಡಿಒಳಗೊಂಡಂತೆ ಸಂಪೂರ್ಣವಾಗಿ ಆವರಣದಲ್ಲಿ ಅಂಗಡಿ ಇರುವುದಿಲ್ಲ. ಪಾನಿಪುರಿ, ಗೋಬಿ, ಕಡ್ಲೆ, ಕಬ್ಬಿನಹಾಲು ಐಸ್‍ಕ್ರೀಮ್, ಇತರೆ ತಿನಿಸಿನ ಮಾರಾಟ ನಿಷೇಧಿಸಲಾಗಿದೆ.

ಕೃಷಿ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕ್ರೀಡಾಕೂಟ, ನಾಟಕ, ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮನಿಷೇಧಿಸಿದೆ.ಪ್ರತಿ ವರ್ಷದಂತೆ ಶ್ರೀ ಗವಿಸಿದ್ಧೇಶ್ವರ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಜರುಗುವ ರಕ್ತದಾನ ಶಿಬಿರನಡೆಸಲಾಗುತ್ತದೆ. ಭಕ್ತರಿಗೆ ವಸತಿ ವ್ಯವಸ್ಥೆ ಇರುವುದಿಲ್ಲ.

ಗವಿಸಿದ್ಧೇಶ್ವರ ಗದ್ದುಗೆ ದರ್ಶನಕ್ಕೆ ಅವಕಾಶವಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತರು ದರ್ಶನ ಪಡೆಯಬಹುದು. ಆದರೆ ಎಲ್ಲಿ ಗುಂಪುಗೂಡಿ ಕೂಡುವಂತಿಲ್ಲ. ಮುಖಕ್ಕೆ ಮಾಸ್ಕ್, ಸ್ಯಾನಿಟೈಜೇಶನ್‌ ಕಡ್ಡಾಯಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.