ADVERTISEMENT

ಜಿಲ್ಲೆಯಲ್ಲಿ ಇಳಿಕೆಯತ್ತ ಸೋಂಕು ಪ್ರಮಾಣ

ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹಾಸಿಗೆ ಖಾಲಿ; ಜನರಲ್ಲಿ ಕಡಿಮೆಯಾಗದ ಭೀತಿ

ಸಿದ್ದನಗೌಡ ಪಾಟೀಲ
Published 4 ಜೂನ್ 2021, 4:35 IST
Last Updated 4 ಜೂನ್ 2021, 4:35 IST
ಕನಕಗಿರಿ ತಾಲ್ಲೂಕಿನ ಚಿಕ್ಕಮ್ಯಾದಿನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಗುರುವಾರ ಬೆರಳಣಿಕೆಯಷ್ಟು ಸೋಂಕಿತರು ಮಾತ್ರ ಕಂಡುಬಂದರು
ಕನಕಗಿರಿ ತಾಲ್ಲೂಕಿನ ಚಿಕ್ಕಮ್ಯಾದಿನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಗುರುವಾರ ಬೆರಳಣಿಕೆಯಷ್ಟು ಸೋಂಕಿತರು ಮಾತ್ರ ಕಂಡುಬಂದರು   

ಕೊಪ್ಪಳ: ಕೋವಿಡ್‌-19 ಎರಡನೇ ಅಲೆ ಜನರನ್ನು ತೀವ್ರವಾಗಿ ಬಾಧಿಸಿದ್ದು, ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ 500ಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣಗಳು ದಾಖಲಾಗುತ್ತಿದ್ದು, ಇದೀಗ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಗುರುವಾರ ಜಿಲ್ಲೆಯಲ್ಲಿ 237 ಹೊಸ ಪ್ರಕರಣ ಕಂಡುಬಂದಿವೆ. ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಶೇ 2ಕ್ಕೆ ಇಳಿದಿದೆ.

ಜಿಲ್ಲೆಯಲ್ಲಿ ಒಟ್ಟು 32,468 ಕೊರೊನಾ ಸೋಂಕಿಗೆ ತುತ್ತಾಗಿದ್ದು, ಇವರಲ್ಲಿ 28,910 ಜನರು ಗುಣಮುಖರಾಗಿದ್ದಾರೆ. ಒಟ್ಟು 446 ಜನರು ಮರಣ ಹೊಂದಿದ್ದಾರೆ. ಗುರುವಾರ 10 ಜನರು ಸೋಂಕಿನಿಂದ ಮೃತರಾಗಿದ್ದಾರೆ.

ಜೂನ್‌ 2ರ ಮಾಹಿತಿಯಂತೆ ತಾಲ್ಲೂಕುವಾರು ಇದುವರೆಗೂ ಗಂಗಾವತಿ- 13,153, ಕೊಪ್ಪಳ- 9,796, ಕುಷ್ಟಗಿ-4,396, ಯಲಬುರ್ಗಾ-4,362 ಸೋಂಕು ಪ್ರಕರಣಗಳು ದಾಖಲಾಗಿವೆ. ಗಂಗಾವತಿ ಪ್ರಥಮ ಸ್ಥಾನದಲ್ಲಿ ಇದ್ದರೆ, ಯಲಬುರ್ಗಾ ಕೊನೆಯ ಸ್ಥಾನದಲ್ಲಿ
ಇದೆ.

ADVERTISEMENT

ಆರೈಕೆ ಕೇಂದ್ರ: ಕೊರೊನಾ ಸೋಂಕಿತರಿಗೆ ಹೋಮ್‌ ಐಸೋಲೇಶನ್‌ ಬದಲು ಜಿಲ್ಲೆಯ ಎಲ್ಲ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಅನ್ನು ಆರಂಭಿಸಲಾಗಿದೆ. ಅಲ್ಲದೆ ಗವಿಮಠದ ವತಿಯಿಂದ 200 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರ ಕಾರ್ಯ ನಿರ್ವಹಿಸುತ್ತಿವೆ. 2 ಸಾವಿರ ಸೋಂಕಿತರಿಗೆ ಚಿಕಿತ್ಸೆ, ಆರೈಕೆ ಕಲ್ಪಿಸುವ ಕೇಂದ್ರಗಳಲ್ಲಿ ಈಗ 1 ಸಾವಿರಕ್ಕೂ ಕಡಿಮೆ ಸಂಖ್ಯೆಯಲ್ಲಿ ಜನರು ಇದ್ದಾರೆ. ಗುರುವಾರ 300ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದು ಸೋಂಕಿನ ತೀವ್ರತೆ ಕಡಿಮೆಯಾಗುವ ಲಕ್ಷಣ ಕಂಡು ಬಂದಿದೆ.

ಎಚ್ಚರಿಕೆ ಅಗತ್ಯ: ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಮತ್ತು ಜಿಲ್ಲಾಡಳಿತ ಡಬಲ್ ಲಾಕ್‌ಡೌನ್‌ ಹೇರಿದೆ. ಪರಿಣಾಮವಾಗಿ ಬಹುತೇಕ ಜನ ಸೇರುವ ಮಾರುಕಟ್ಟೆ, ಉಪಹಾರ ಮಂದಿರಗಳು, ಕಲ್ಯಾಣಮಂಟಪಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮ, ಜಾತ್ರೆ ಉತ್ಸವಗಳನ್ನು ಕಡ್ಡಾಯವಾಗಿ ರದ್ದು ಮಾಡಲಾಗಿದೆ. ಇದರಿಂದ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದೆ.

ಆದರೂ ಕೂಡಾ ಆತಂಕ ಮಾತ್ರ ಇನ್ನೂ ತಪ್ಪಿಲ್ಲ. ನಿತ್ಯ ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೈರನ್‌ ಬಾರಿಸುತ್ತಾ ವೇಗವಾಗಿ ಹೋಗುತ್ತಿದ್ದ ಆಂಬುಲೆನ್ಸ್‌ಗಳ ಶಬ್ಧ ಕೂಡಾ ಕಡಿಮೆಯಾಗಿದೆ. ಆಮ್ಲಜನಕ, ವೆಂಟಿಲೇಟರ್‌ಗಳ ಬೇಡಿಕೆ ಕೂಡಾ ತಗ್ಗಿದೆ. ಮೇ ತಿಂಗಳು ಪೂರ್ತಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಸೌಲಭ್ಯ ಒದಗಿಸುವಲ್ಲಿ ಹಗಲೂ, ರಾತ್ರಿ ಪರದಾಡಿದ್ದರು.

ಜೂನ್‌ 1ರಿಂದ ಸೋಂಕು ಇಳಿಕೆಯಾಗುತ್ತಿದ್ದು. ಸರ್ಕಾರ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಜೂನ್‌ 14ರವರೆಗೆ ಮತ್ತೆ ಲಾಕ್‌ಡೌನ್‌ ವಿಧಿಸಿದೆ. ಹೋಂ ಐಸೋಲೇಶನ್‌ಗೆ ಒಳಗಾದವರು 150 ಅನ್ನು ಮೀರಿಲ್ಲ.

ದಾನಿಗಳ ನೆರವು: ಕೊರೊನಾ ಸೋಂಕಿತರಿಗೆ ಹಣ್ಣು, ಹಾಲು, ಮಾಸ್ಕ್, ಸ್ಯಾನಿಟೈಸರ್, ದಿನಸಿ ಕಿಟ್‌, ಯೋಗ, ಸಂಗೀತ ಎಂದು ಅನೇಕ ರೂಪದಲ್ಲಿ ಸಹಾಯದ ಜೊತೆಗೆ ಆತ್ಮಸ್ಥೈರ್ಯ ತುಂಬುತ್ತಿರುವ ಕಾರ್ಯ ನಡೆದಿದೆ.

ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಕೂಡಾ ಪರಿಣಾಮ ಬೀರಲಿದೆ ಎಂಬ ಆತಂಕ ಪಾಲಕರಲ್ಲಿ
ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.