ಕೊಪ್ಪಳ: ತಾಲ್ಲೂಕಿನ ಮಂಗಳಾಪುರದಲ್ಲಿ ಶವ ಸಂಸ್ಕಾರ ನಡೆಸಲು ಸ್ಮಶಾನ ಜಾಗವಿಲ್ಲದ್ದಕ್ಕೆ ಮಂಗಳವಾರ ಗಲಾಟೆ ನಡೆದಿದ್ದ ಕಾರಣ ಬುಧವಾರ ಅಧಿಕಾರಿಗಳ ಗ್ರಾಮದಲ್ಲಿ ಸಭೆ ನಡೆಸಿ ಸ್ಮಶಾನಕ್ಕಾಗಿ ಜಾಗ ನೀಡಲು ಜನರಿಗೆ ಒಂದು ದಿನ ಕಾಲಾವಕಾಶ ನೀಡಿದ್ದಾರೆ.
ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗುಲಾ, ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ ಹಾಗೂ ಗ್ರಾಮೀಣ ಠಾಣೆಯ ಪಿಎಸ್ಐ ಅಶೋಕ ಬೇವೂರು ಅವರ ಸಮ್ಮುಖದಲ್ಲಿ ನಡೆದ ಗ್ರಾಮಸಭೆಯಲ್ಲಿ ಸ್ಮಶಾನಕ್ಕಾಗಿ ಭೂಮಿ ನೀಡುವ ಕುರಿತು ಚರ್ಚೆ ನಡೆಯಿತು.
’ಗ್ರಾಮದ ಸಮೀಪದಲ್ಲಿ ಭೂಮಿ ಹೊಂದಿರುವವರು ಸ್ವಯಂಪ್ರೇರಿತರಾಗಿ ಜಾಗ ನೀಡುವುದಾದರೆ ಒಂದು ದಿನದಲ್ಲಿ ತಿಳಿಸಿದರೆ ನೇರವಾಗಿ ಖರೀದಿ ಮಾಡಲಾಗುವುದು. ಇಲ್ಲವಾದರೆ ಗ್ರಾಮಕ್ಕೆ ಒಂದು ಕಿ.ಮೀ. ದೂರದಲ್ಲಿ ಎರಡು ಎಕರೆ ಸರ್ಕಾರಿ ಭೂಮಿಯಿದ್ದು ಅದನ್ನೇ ಸ್ಮಶಾನಕ್ಕಾಗಿ ನೀಡಲಾಗುವುದು’ ಎಂದು ಅಧಿಕಾರಿಗಳು ಹೇಳಿದರು.
ಆಗ ಕೆಲ ಗ್ರಾಮಸ್ಥರು ನಮ್ಮೂರಿನ ಸಮೀಪದಲ್ಲಿಯೇ ಜಾಗ ನೀಡಿ ಎಂದರೆ, ಇನ್ನೂ ಕೆಲವರು ಹಳ್ಳಕ್ಕೆ ಹೋಗುವ ದಾರಿಯಲ್ಲಿ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿದರು. ಒತ್ತುವರಿ ಬಗ್ಗೆ ಪರಿಶೀಲನೆ ನಡೆಸಲು ಜು. 17ರಂದು ಸರ್ವೆ ಮಾಡಿ ನೋಟಿಸ್ ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಗ್ರಾಮದ ವ್ಯಕ್ತಿಯೊಬ್ಬರು ಗ್ರಾಮದ ಸಮೀಪದಲ್ಲಿ ಒಂದು ಎಕರೆ ಜಾಗ ಹೊಂದಿದ್ದು ನೀಡುವ ಬಗ್ಗೆ ನಿರ್ಧರಿಸಿಲ್ಲ. ಒಂದು ದಿನದಲ್ಲಿ ಈ ಕುರಿತು ತೀರ್ಮಾನಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಜಾಗವಿಲ್ಲದ ಕಾರಣಕ್ಕೆ ಆಕ್ರೋಶಗೊಂಡಿದ್ದ ಜನ ಶಾಲೆಯ ಮುಂದಿನ ಆವರಣದಲ್ಲಿ ಅಂತಿಮ ಸಂಸ್ಕಾರಕ್ಕೆ ಕಟ್ಟಿಗೆಗಳನ್ನು ಜೋಡಿಸಿಕೊಂಡು ಸಿದ್ಧತೆ ಮಾಡಿಕೊಂಡಿದ್ದರು. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ನೇರ ಖರೀದಿಗೆ ಭೂಮಿ ಕೊಡುವವರಿಗೆ ಒಂದು ದಿನ ಕಾಲಾವಕಾಶ ಕೊಡಲಾಗುತ್ತದೆ. ಇಲ್ಲವಾದರೆ ಎರಡು ಎಕರೆ ಸರ್ಕಾರಿ ಭೂಮಿ ಗುರುತಿಸಲಾಗಿದ್ದು ಅಲ್ಲಿಯೇ ಸ್ಮಶಾನಕ್ಕೆ ಜಾಗ ನಿಗದಿ ಮಾಡಲಾಗುವುದು.-ವಿಠ್ಠಲ ಚೌಗುಲಾ ಕೊಪ್ಪಳ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.