ಗಂಗಾವತಿ: ನಗರದ ಬಸ್ ನಿಲ್ದಾಣದ ಎದುರು ಹಿಂದೂ ಮಹಾ ಮಂಡಳಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಸ್ಥಳಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿ ದರ್ಶನ ಪಡೆದರು.
ಬೆಳಿಗ್ಗೆ ಸಿ.ಟಿ ರವಿ ಸಿಂಧನೂರಿಗೆ ತೆರಳುತ್ತಿರುವಾಗ ಮಾರ್ಗದ ಮಧ್ಯೆ ಗಂಗಾವತಿ ಬರುತ್ತಿದ್ದಂತೆ ಪರಣ್ಣ ಮುನವಳ್ಳಿ ಅವರ ಮನೆಗೆ ಭೇಟಿ ನೀಡಿದರು.
ಈ ವೇಳೆ ಬಿಜೆಪಿಯ ಹಿರಿಯ ನಾಯಕರು, ಮುಖಂಡರು, ಪಕ್ಷದ ಪದಾಧಿಕಾರಿಗಳು ಸಿ.ಟಿ ರವಿ ಅವರಿಗೆ ಸನ್ಮಾನ ಮಾಡಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.
ನಂತರ ಸಿ.ಟಿ ರವಿ ಮಾಧ್ಯಮದವರ ಜೊತೆ ಮಾತನಾಡಿ,‘ಕೊಪ್ಪಳ ಜಿಲ್ಲೆಯ ಗವಿಸಿದ್ದಪ್ಪ ನಾಯಕ ಕೊಲೆಯು ಜಿಹಾದಿನ ಒಂದು ಮುಖ. ಜಿಹಾದಿಗೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಸೇರಿ ಹಲವು ಮುಖಗಳಿವೆ’ ಎಂದರು.
‘ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಸೌಜನ್ಯಳನ್ನ ವಿರುದ್ಧ ನಿಲ್ಲಿಸುವುದೇ ಸಿಎಂ ಸಿದ್ದರಾಮಯ್ಯ ಅವರ ಕೆಲಸ. ಸೌಜನ್ಯ ಹತ್ಯೆಗೆ ನ್ಯಾಯ ಸಿಗಬೇಕು. ನಾವು ಬಯಸುವುದು ಅದನ್ನೇ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಒಬ್ಬನನ್ನು ಬಂಧಿಸಲಾಗಿತ್ತು. ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಆ ವ್ಯಕ್ತಿ ಹೊರಗೆ ಬಂದ. ಆಗ ಸರ್ಕಾರ, ಪೊಲೀಸರು ಮೇಲ್ಮನವಿ ಸಲ್ಲಿಸಬೇಕಿತ್ತು. ಆದರೆ ಆಗಿಲ್ಲ. ನಾವು ಹಿಂದೂ ಧರ್ಮದ ಪರ, ನ್ಯಾಯದ ಪರ. ಬುರುಡೆ ಗ್ಯಾಂಗ್ ಎಲ್ಲ ಸುಳ್ಳು. ಭಕ್ತಿ ಭಾವಕ್ಕೆ ಧಕ್ಕೆ ತರಲು ಷಡ್ಯಂತ್ರ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.
‘ಇನ್ನು ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟುಗಳ ನಿರ್ಮಾಣ ಬಿಟ್ಟು, ಸಿಎಂ ಖಾಸಗಿ ವಿಮಾನ, ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದ್ದಾರೆ. ಮೊದಲು ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು’ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಮಾಜಿ ಸಂಸದ ಶಿವರಾಮೇಗೌಡ, ಡಾ.ಬಸವರಾಜ ಕ್ಯಾವಟರ್, ಚಂದ್ರಶೇಖರ ಹಲಗೇರಿ, ಚೆನ್ನಪ್ಪ ಮಳಗಿ, ಸಾಗರ ಮುನವಳ್ಳಿ, ನಗರಸಭೆ ಸದಸ್ಯರಾದ ವಾಸುದೇವ ನವಲಿ, ನವೀನ್ ಮಾಲಿಪಾಟೀಲ, ಶ್ರೀನಿವಾಸ ದೂಳ, ಅಕ್ಕಿ ಪ್ರಕಾಶ, ಅರ್ಜುನ್ ರಾಯ್ಕರ್, ಅನುಶಿಲ್ಪಿ, ಚಿದಾನಂದ ನಾಯಕ, ಶಿವಕುಮಾರ ಅಂಗಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.