
ಕೊಪ್ಪಳ: ಮೋಸದ ಹೊಸಹಾದಿ ಹುಡುಕಿರುವ ಸೈಬರ್ ವಂಚಕರು, ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಯಮನೂರಪ್ಪ ಸಿ. ಎಂಬುವವರನ್ನು ವಿದೇಶದಲ್ಲಿ ‘ಸೈಬರ್ ಒತ್ತೆಯಾಳು’ ಆಗಿಟ್ಟುಕೊಂಡು ಹಿಂಸೆ ನೀಡಿದ್ದು, ಅವರಿಂದಲೇ ಸೈಬರ್ ವಂಚನೆಗಳನ್ನು ಮಾಡಿಸಿದ್ದಾರೆ.
22 ವರ್ಷದ ಯಮನೂರಪ್ಪ ಮೊದಲು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಿದ್ದರು. ಬಳಿಕ ಅಲ್ಲಿಯೇ ವಿಮಾನ ನಿಲ್ದಾಣದ ಸಿಬ್ಬಂದಿಯಾಗಿದ್ದರು. ವಿದೇಶದಲ್ಲಿ ದೊಡ್ಡ ನೌಕರಿ ಹಾಗೂ ಕೈತುಂಬಾ ಸಂಬಳ ಸಿಗುತ್ತದೆ ಎನ್ನುವ ಸಾಮಾಜಿಕ ಜಾಲತಾಣದಲ್ಲಿನ ಜಾಹೀರಾತು ನೋಡಿ, ನಿಜವೆಂದು ನಂಬಿ ವಂಚನೆಗೆ ಒಳಗಾಗಿದ್ದಾರೆ.ಎದ
ಅಪರಿಚಿತರು ಐಟಿ ಕಂಪನಿಯಲ್ಲಿ ಹಾಗೂ ಡಾಟಾ ಎಂಟ್ರಿ ಮಾಡುವ ಕೆಲಸ ಕೊಡಿಸುವ ಎಜೆಂಟರು ಎಂದು ಪರಿಚಯಿಸಿಕೊಂಡು ವಾಟ್ಸ್‌ಆ್ಯಪ್ ಮೂಲಕ ಜಿಲ್ಲೆಯ ಯುವಕನ ಜೊತೆ ಸಂದೇಶ ವಿನಿಯಮ ಮಾಡಿಕೊಂಡು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾರೆ. ಬಳಿಕ ಮೂರೂವರೆ ತಿಂಗಳು ಬ್ಯಾಂಕಾಕ್ ಮತ್ತು ಮಯನ್ಮಾರ್‌ಗೆ ಕರೆದುಕೊಂಡು ಹೋಗಿ ‘ಸೈಬರ್ ಒತ್ತೆಯಾಳು’ ಮಾಡಿಟ್ಟುಕೊಂಡಿದ್ದರು. ಇದರಲ್ಲಿ ಒಂದು ತಿಂಗಳು ಸೈಬರ್ ಅಪರಾಧಗಳನ್ನು ಮಾಡುವಂತೆ ಒತ್ತಡ ಹೇರಿ ಹಿಂಸಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಂಚಕರು ಯಮನೂರಪ್ಪ ಅವರ ಮೊಬೈಲ್‌ನಲ್ಲಿದ್ದ ವಾಟ್ಸ್‌ಆ್ಯಪ್ ಗ್ರೂಪ್, ಭಾರತದಲ್ಲಿದ್ದಾಗ ಮಾಡಿದ್ದ ಚಾಟ್‌ಗಳು, ಫೋನ್ ಪೇ, ಫೋಟೊ ಹಾಗೂ ವಿಡಿಯೊಗಳನ್ನು ತೆಗೆಯಿಸಿ ಹಾಕಿದ್ದಾರೆ. ಸಿಐಡಿ ತಂಡದವರು ಯುವಕನನ್ನು ವಿದೇಶದಿಂದ ರಕ್ಷಣೆ ಮಾಡಿ ಜಿಲ್ಲೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಪ್ಪಳದ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೈಬರ್ ವಂಚಕರು ಮೊದಲು ‘ನೌಕರಿ ಕೊಡಿಸುತ್ತೇವೆ, ಹಣ ದುಪ್ಪಟ್ಟು ಮಾಡಿಕೊಡುತ್ತೇವೆ’ ಎಂದು ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದರು. ಡಿಜಿಟಲ್ ಅರೆಸ್ಟ್ ಎನ್ನುವ ಪ್ರಯೋಗವನ್ನೂ ಮಾಡಿದ್ದರು. ಈಗ ವಿದೇಶದಲ್ಲಿಯೂ ಒತ್ತೆಯಾಳು ಮಾಡಿಕೊಂಡು ಅಪರಾಧದ ಹೊಸ ಮುಖ ತೋರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.