
ಕೊಪ್ಪಳ: ಯಲಬುರ್ಗಾ ತಾಲ್ಲೂಕಿನ ಕೋನಸಾಗರ ಗ್ರಾಮದಲ್ಲಿ ದಲಿತ ಹೋರಾಟಗಾರ ಮೌನೇಶ್ ಅವರ ಮನೆಯನ್ನು ಸವರ್ಣೀಯ ಕುಟುಂಬದವರು ಸುಟ್ಟು ಹಾಕಿರುವ ಅನುಮಾನವಿದ್ದು ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಮೂಹಿಕ ಸಂಘಟನೆಗಳ ಹೋರಾಟ ಸಮಿತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಇಲ್ಲಿನ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಬಳಿ ಸೇರಿದ ಹೋರಾಟಗಾರರು ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರಿಗೆ ಮನವಿ ಸಲ್ಲಿಸಿದರು.
‘ಮನೆ ಸುಟ್ಟ ಪ್ರಕರಣದ ವಿಚಾರಣೆ ಸರಿಯಾಗಿ ನಡೆಯುತ್ತಿಲ್ಲ. ಆದ್ದರಿಂದ ಯಲಬುರ್ಗಾ ಪಿಎಸ್‌ಐ ಹಾಗೂ ಕೆಲ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು, ನೊಂದ ಕುಟುಂಬಕ್ಕೆ ವಸತಿ, ಭೂಮಿ ಹಾಗೂ ಆರ್ಥಿಕ ಪರಿಹಾರ ನೀಡಬೇಕು, ಮೇಲಿಂದ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಮಾನಸಿಕ ಹಿಂಸೆ ನೀಡುವುದನ್ನು ನಿಲ್ಲಿಸಬೇಕು, ಕೋನಸಾಗರ ಗ್ರಾಮದಲ್ಲಿ ಸೌಹಾರ್ದತೆ ನೆಲೆಸಲು ಜಿಲ್ಲಾಮಟ್ಟದ ಅಧಿಕಾರಿಗಳು ಶಾಂತಿ ಸಭೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಅಲೆಮಾರಿ ಸಮುದಾಯದ ಜಿಲ್ಲಾಧ್ಯಕ್ಷ ಸಂಜಯದಾಸ್ ಕೌಜಗೇರಿ, ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಮುದಕಪ್ಪ ಹೊಸಮನಿ, ನಿಂಗಪ್ಪ ಬೆಣಕಲ್, ಶಿವಪುತ್ರಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.