ಕನಕಗಿರಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಂಘಟನೆಯ ಪ್ರಮುಖರು ಮಾತನಾಡಿ,‘ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಾಲಯಕ್ಕೆ ಅವಮಾನ ಮಾಡಿದ ಕೆಟ್ಟ ಮನಸ್ಥಿತಿಯ ವಕೀಲನನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರು ಸಾಮಾಜಿಕ ಅಸಮಾನತೆ ಎದುರಿಸಿ ಅರ್ಹತೆ ಮತ್ತು ಸ್ವ–ಸಾಮರ್ಥ್ಯದ ಮೂಲಕ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಸಂವಿಧಾನ ಜಾರಿಗೆ ಬಂದು 75 ವರ್ಷಗಳ ಆದ ಬಳಿಕವೂ ಜಾತೀಯತೆ ಹಾಗೂ ಅಸಮಾನತೆ ಕೋಮುವಾದಿಗಳ ಮನಸ್ಸಿನಲ್ಲಿ ಇನ್ನೂ ಬೇರೂರಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ’ ಎಂದು ಹೇಳಿದರು.
‘ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜ ಒಡೆದು, ಪರಸ್ಪರ ದ್ವೇಷ ಮತ್ತು ಅಸಹನೆ ಹುಟ್ಟು ಹಾಕಿರುವ ವಿಕೃತ ಮನಸ್ಸುಗಳು ಇಂದು ದೇಶದಲ್ಲಿ ವಿಜೃಂಭಿಸುತ್ತಿವೆ. ರಾಕೇಶ್ ಕಿಶೋರ್ ಅವರಂಥ ಮನುವಾದಿ ಮನಸ್ಸುಗಳು ಹುಟ್ಟಿಕೊಂಡು ಕೆಲವು ಪುಂಡರ ಜೊತೆ ಸೇರಿ ದುಷ್ಕೃತ್ಯ ಸಂಭ್ರಮಿಸುವುದನ್ನು ಕಾಣುತ್ತಿರುವುದು ದುರಂತವಾಗಿದೆ’ ಎಂದರು.
‘ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಹಾಗೂ ನ್ಯಾಯಾಲಯಕ್ಕೆ ಅವಮಾನ ಮಾಡಿದ ವಕೀಲನನ್ನು ಬಂಧಿಸಿ ಅವರ ಮೇಲೆ ಹಾಗೂ ಅವರನ್ನು ಬೆಂಬಲಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ದುರುಗಪ್ಪ ದೊಡ್ಡಮನಿ, ತಾಲ್ಲೂಕು ಸಂಚಾಲಕ ವೆಂಕಟೇಶ ಪೂಜಾರಿ ಆಗ್ರಹಿಸಿದರು.
ಪ್ರಮುಖರಾದ ಕನಕಪ್ಪ ಜವಳಗೇರಿ, ಹನುಮೇಶ ಜವಳಗೇರಿ, ಉಮೇಶ ಸೋಮಸಾಗರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.