ADVERTISEMENT

ಗಂಗಾವತಿ: ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:48 IST
Last Updated 4 ಫೆಬ್ರುವರಿ 2026, 7:48 IST
   

ಗಂಗಾವತಿ: ನಗರದ 8ನೇ ವಾರ್ಡ್ ಪ್ರಶಾಂತ ನಗರದಲ್ಲಿ ಕರ್ತವ್ಯನಿರತ ನೀರು ಪೂರೈಕೆದಾರ ರಾಮಣ್ಣ ಕಳ್ಳಿಮನಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಪೊಲೀಸರ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಸದಸ್ಯರು ನಗರದ ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಸಂ.ಕಾರ್ಯದರ್ಶಿ ರಗಡಪ್ಪ ಹುಲಿಹೈದರ ಮಾತನಾಡಿ, ‘ಕರ್ತವ್ಯ ನಿರತ ನೀರು ಪೂರೈಕೆದಾರ ರಾಮಣ್ಣ ಕಳ್ಳಿಮನಿ ಮೇಲೆ ಜಾಫರ್ ಮತ್ತು ಅವರ ಬೆಂಬಲಿಗರು ನೀರಿನ ಕುರಿತ ವಿಚಾರವಾಗಿ ಜ.31ರಂದ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ನೀಡಿದರೂ ಪ್ರಕರಣ ದಾಖಲಾಗಿಲ್ಲ, ಕ್ರಮವನ್ನೂ ಜರುಗಿಸಿಲ್ಲ’ ಎಂದರು.

‘ಈ ಹಲ್ಲೆಯಿಂದ ಸಿಬ್ಬಂದಿ ಭಯಪಟ್ಟು, ಕರ್ತವ್ಯಕ್ಕೆ ಬರುತ್ತಿಲ್ಲ. ಕಳೆದ ಮೂರು ದಿನಗಳಿಂದ ಠಾಣೆಗೆ ಸುತ್ತಾಡಿದ್ದು ಕ್ರಮ ಕೈಗೊಂಡಿಲ್ಲ. ಪ್ರಕರಣ ದಾಖಲಾಗುವವರೆಗೆ ಹೋರಾಟ ನಿಲ್ಲುವುದಿಲ್ಲ. ಮನೆ ನಿರ್ಮಾಣಕ್ಕೆ ನಗರಸಭೆ ನೀರು ಪೂರೈಕೆ ಘಟಕದಿಂದ ನೀರು ಪಡೆಯುತ್ತಿದ್ದರೂ, ನಿರ್ವಹಣೆ ಎಂಜಿನಿಯರ್‌ಗಳು ಹಲ್ಲೆ ಆರೋಪಿ ಜಾಫರ್ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು’ ಎಂದು ಒತ್ತಾಯಿಸಿ, ಗ್ರೇಡ್‌-2 ತಹಶೀಲ್ದಾರ್ ಮಹಾಂತಗೌಡ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಸಂಘದ ತಾಲ್ಲೂಕು ಅಧ್ಯಕ್ಷ ವಾಹೀದ್ ಖಾನ್, ಪದಾಧಿಕಾರಿಗಳಾದ ಷಣ್ಮುಖಪ್ಪ, ಎ.ನಾಗರಾಜ್, ಮಂಜುನಾಥ, ಬಸವರಾಜ ಸುಳಕೋಡ್, ಕಾಂತಮ್ಮ, ಅಂಬಿಕಾ, ಶೋಭಾ ಅಂಗಡಿ, ಗೌತಮ್, ರಮೇಶ ಈಡಿಗೇರ್, ಇಬ್ರಾಹಿಂ, ರಾಮಣ್ಣ, ರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.