ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ 371(ಜೆ) ಮೀಸಲಾತಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾ ಯುವ ಘಟಕ ಮತ್ತು ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಹೋರಾಟಕ್ಕೆ ವಿವಿಧ ಸಂಘಟನೆಗಳು, ವಕೀಲರು, ವಿದ್ಯಾರ್ಥಿಗಳು, ಬಿಜೆಪಿ, ಸಂಘಸಂಸ್ಥೆಗಳು, ರಾಜಕೀಯ ಮುಖಂಡರು ಬೆಂಬಲ ನೀಡಿದರು. ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಸೇರಿ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬೇಡಿಕೆ ಈಡೇರಿಸಲೇಬೇಕು ಎಂದು ಆಗ್ರಹಿಸಿದರು. ಬಳಿಕ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಅವರಿಗೆ ಮನವಿ ಸಲ್ಲಿಸಲಾಯಿತು.
371(ಜೆ) ಸಮರ್ಪಕ ಅನುಷ್ಠಾನ, ಜಿಲ್ಲಾ ಕಚೇರಿ ಸ್ಥಾಪನೆ, ಲೋಪದೋಷ ಸರಿಪಡಿಸಿ ನ್ಯಾಯ ಒದಗಿಸುವಂತೆ ಹಾಗೂ ಕಾಯ್ದೆ ಕುರಿತು ಗೊಂದಲ ಸೃಷ್ಟಿಸುತ್ತಿರುವ ಸಂಘಟನೆಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆಯೂ ಆಗ್ರಹಿಸಲಾಯಿತು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಮಾತನಾಡಿ, ‘371(ಜೆ) ನಿರ್ದಿಷ್ಟ ಸರ್ಕಾರದ ಅಥವಾ ಪಕ್ಷದ ಒತ್ತಾಯದ ಮೇರೆಗೆ ಸಿಕ್ಕ ವಿಶೇಷ ಅಧಿಕಾರವಲ್ಲ. ಇದು ಸಂವಿಧಾನ ಬದ್ಧ ಹಕ್ಕು ಆಗಿದ್ದು, ಹೋರಾಟ ಮಾಡಿಯೇ ಪಡೆದುಕೊಂಡಿದ್ದೇವೆ. ಆದರೆ ಈ ಹಕ್ಕು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಜನಪ್ರತಿನಿಧಿಗಳು ಸೇರಿದಂತೆ ಅನ್ಯ ಭಾಗದ ಸಂಘಟನೆಗಳು ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ‘371(ಜೆ) ಯಾವುದೇ ಪಕ್ಷಗಳ ಸರ್ಕಾರ ಅಧಿಕಾರಕ್ಕೆ ಬಂದರೂ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ. ಅರಸರ ಕಾಲದಲ್ಲಿ ಹಳೆಮೈಸೂರು ಪ್ರಾಂತ್ಯ ಶೈಕ್ಷಣಿಕ, ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿತು. ಮುಂಬೈ ಕರ್ನಾಟಕ ಹಾಗೂ ಇತರೆ ಪ್ರಾಂತ್ಯಗಳಲ್ಲಿ ಶಿಕ್ಷಣ ಪಡೆಯಲು ಅನುಕೂಲವಿತ್ತು. ಆದರೆ ನಿಜಾಮರ ಆಳ್ವಿಕೆಯಲ್ಲಿ ಶಿಕ್ಷಣ, ಉದ್ಯೋಗದಲ್ಲಿ ಹಿಂದುಳಿದಿದ್ದ ಪ್ರದೇಶಕ್ಕೆ ಮೀಸಲಾತಿ ಸಿಕ್ಕಿದೆ. ಇದು ಈಗ ಸಮರ್ಪಕ ಅನುಷ್ಠಾನವಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರಮೇಶ ತುಪ್ಪದ, ಜೆಡಿಎಸ್ ಜಿಲ್ಲಾಧ್ಯಕ್ಷ ಉದ್ಯಮಿ ಶ್ರೀನಿವಾಸ ಗುಪ್ತಾ, ಹಿರಿಯ ವಕೀಲರಾದ ವಿ. ಎಂ ಭೂಸನೂರಮಠ, ಆರ್. ಬಿ ಪಾನಘಂಟಿ, ಆಸೀಫ್ ಅಲಿ, ಮುಖಂಡರಾದ ವೀರೇಶ ಮಹಾಂತಯ್ಯನಮಠ, ಸುರೇಶ ಭೂಮರಡ್ಡಿ, ಬಸವರಾಜ ಬಳ್ಳೊಳ್ಳಿ, ರಾಜು ನಾಯಕ್, ಗಣೇಶ ಹೊರತಟ್ನಾಳ, ಸಾವಿತ್ರಿ ಮುಜಮದಾರ, ಮಹಾಲಕ್ಷ್ಮಿ ಕಂದಾರಿ, ಸಾವಿತ್ರಿ ಮುಜುಮದಾರ, ಸಂತೋಷ ದೇಶಪಾಂಡೆ, ಹೋರಾಟಗಾರರು ಹಾಗೂ ಪತ್ರಕರ್ತರು ಪಾಲ್ಗೊಂಡಿದ್ದರು.
371 ಜೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ನಡೆಯುವ ಹೋರಾಟಕ್ಕೆ ಬಿಜೆಪಿ ಸದಾ ಬೆಂಬಲ ನೀಡುತ್ತದೆ. ಡಾ. ಬಸವರಾಜ ಕ್ಯಾವಟರ್ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೋರಾಟ ರೂಪಿಸಲಾಗಿದೆ. ಆದರೆ ನಮಗೆ ಸಿಗಬೇಕಿದ್ದ ಸೌಲತ್ತು ಸಿಕ್ಕಿಲ್ಲ. ಈಗಲಾದರೂ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಗೌತಮ್ ಪಾಟೀಲ್ ಹೋರಾಟಗಾರ
ಪ್ರಮಾಣ ಪತ್ರ ವಿತರಣೆಯಲ್ಲೂ ವಿಳಂಬ ಮೀಸಲಾತಿ ಪಡೆದುಕೊಳ್ಳಲು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜನರಿಗೆ 371(ಜೆ) ಪ್ರಮಾಣಪತ್ರ ಅಗತ್ಯವಾಗಿದ್ದು ಅದನ್ನು ನೀಡಲು ಜಿಲ್ಲೆಯ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ತಾಂತ್ರಿಕ ತೊಂದರೆಯ ಕಾರಣ ಹೇಳುತ್ತಿದ್ದಾರೆ ಎನ್ನುವ ವಿಷಯವನ್ನು ಹೋರಾಟಗಾರರು ಜಿಲ್ಲಾಧಿಕಾರಿ ನಲಿನ್ ಅತುಲ್ ಗಮನಕ್ಕೆ ತಂದರು. ಪ್ರಮಾಣ ಪತ್ರ ಪಡೆದುಕೊಳ್ಳಲು ಒಟ್ಟು ಒಂಬತ್ತು ದಾಖಲೆಗಳಲ್ಲಿ ಒಂದು ಕೊಟ್ಟರೂ ಸಾಕು ಎನ್ನುವ ನಿಯಮವಿದೆ. ಆದರೆ ಅನೇಕರು ಈ ಗೊಂದಲದಿಂದಾಗಿ ಅನೇಕರು ಅರ್ಜಿಯೇ ಹಾಕುತ್ತಿಲ್ಲ. ಹಾಕಿದ ಅರ್ಜಿಗಳಿಗೆ ಇಲ್ಲಸಲ್ಲದ ಕಾರಣ ಹೇಳಿ ಹಿಂಬರಹ ನೀಡಲಾಗುತ್ತಿದೆ. ಈ ಕುರಿತು ಸಹಾಯಕ ಆಯಕ್ತರ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನಲಿನ್ ಅತುಲ್ ’ಕಾರಟಗಿ ಭಾಗದಲ್ಲಿ ಮಾತ್ರ ಈ ಸಮಸ್ಯೆ ಇರುವುದು ಗಮನಕ್ಕೆ ಬಂದಿತ್ತು. ಜಿಲ್ಲೆಯಾದ್ಯಂತ ಸಮಸ್ಯೆಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹರಿಸುವೆ’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.