ADVERTISEMENT

ಯಲಬುರ್ಗಾ | ಆಶಾ ಕಾರ್ಯಕರ್ತೆಯರ ತಾಲ್ಲೂಕು ಮಟ್ಟದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 16:12 IST
Last Updated 20 ಜುಲೈ 2024, 16:12 IST
ಯಲಬುರ್ಗಾ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರ ಪ್ರಥಮ ತಾಲ್ಲೂಕು ಮಟ್ಟದ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿದರು
ಯಲಬುರ್ಗಾ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರ ಪ್ರಥಮ ತಾಲ್ಲೂಕು ಮಟ್ಟದ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿದರು   

ಯಲಬುರ್ಗಾ: ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಸರ್ಕಾರಕ್ಕೆ ಒತ್ತಾಯಿಸಿದರು.

ಎಐಯುಟಿಯುಸಿ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಶನಿವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಪ್ರಥಮ ಆಶಾ ಕಾರ್ಯಕರ್ತೆಯರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮುದಾಯ ಸಂಘಟನೆಯಲ್ಲಿನ ಸಮಾಜದ ಆರೋಗ್ಯ ಸುಧಾರಣೆ ಹಾಗೂ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಬಹುತೇಕ ಕೆಳ ಹಂತದ ಕೆಲಸವನ್ನು ಆಶಾ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದಾರೆ. ಇವರ ಕ್ರಿಯಾಶೀಲತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಉತ್ತಮ ಸ್ಥತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಇವರ ಸೇವೆಯನ್ನು ಗುರುತಿಸಿ ಸರ್ಕಾರಿ ನೌಕರರನ್ನಾಗಿ ಘೋಷಿಸಿ ನ್ಯಾಯ ಕೊಡಬೇಕಾಗಿದೆ ಎಂದರು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ  ಶರಣು ಗಡ್ಡಿ, ಸಾಮಾಜಿಕ ಸ್ವಾಸ್ಥಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಆಶಾ ಅವರು ಜೀವದ ಹಂಗು ತೊರೆದು ಕೊರೊನಾ ಕಾಲದಲ್ಲಿ ಅನುಪಮ ಸೇವೆಯು ಶ್ಲಾಘಿಸುವಂತಹದು. ಈ ಸೇವೆಯನ್ನು ಗುರುತಿಸಿ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಆರೋಗ್ಯ ನಾಯಕರು ಎಂದು ಬಣ್ಣಿಸಿದೆ. ಯಾವುದೇ ಸೌಲಭ್ಯಗಳಿಲ್ಲದೇ ಕಡಿಮೆ ಗೌರವಧನವನ್ನು ಪಡೆದು ಹೆಚ್ಚಿನ ಸೇವೆ ಮಾಡುತ್ತಿರುವ ಆಶಾ ಅವರಿಗೆ ಸೂಕ್ತ ಸ್ಥಾನಮಾನ ಹಾಗೂ ಆರ್ಥಿಕ ಸೌಲಭ್ಯಗಳು ದೊರೆಯಬೇಕಾಗಿದೆ. ಕನಿಷ್ಠ ₹15 ಸಾವಿರ ವೇತನ, 60 ವರ್ಷ ಪೂರೈಸಿದವರಿಗೆ ಇಡುಗಂಟು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೊದಲ ಆದ್ಯತೆಯಾಗಬೇಕಾಗಿದೆ ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲಾ ಕಾರ್ಯದರ್ಶಿ ಕೌಶಲ್ಯ, ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕಾ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶೋಭಾ ಹೂಗಾರ ವಹಿಸಿ ಮಾತನಾಡಿದರು.

ಇದಕ್ಕು ಮುನ್ನ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ವಿವಿಧ ಘೋಷಣೆಗಳನ್ನು ಕೂಗುತ್ತಾ ಆಶಾ ಕಾರ್ಯಕರ್ತೆಯರು ಮೆರವಣಿಗೆ ನಡೆಸಿದಿದರು. ಸಂಗನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕೊಪ್ಪಳ ತಾಲ್ಲೂಕಾಧ್ಯಕ್ಷೆ ಸುನೀತಾ, ಗಿರಿಜಾ ಕೊಪ್ಪಳ, ಶಂಕ್ರಮ್ಮ ಹಳ್ಳಿಕೇರಿ, ಆಶಾ ಸುಗಮಕಾರಾದ ಪರಿಮಳ ಬಡಿಗೇರ, ಶರಣಮ್ಮ ಹಿರೇಮಠ, ಭಾಗ್ಯಶ್ರೀ ಗೊಲ್ಲರ, ಶಂಶೌದ ಬೇಗಂ, ಹನುಮಕ್ಕ, ನೀಲಮ್ಮ ತಟ್ಟಿ, ಶಂಕ್ರಮ್ಮ.ಎಂ.ಎಚ್. ಅನ್ನಪೂರ್ಣ, ಶಿವಮ್ಮ, ಶಶಿಕಲಾ ಹುಲ್ಲೂರು, ಶಾರಾದ, ಶಬಾನಾ, ಸುನಂದಾ ಮುಧೋಳ, ಗಂಗಮ್ಮ ಬೇವೂರು, ಅನ್ನಪೂರ್ಣ ಮುಂಡರಗಿ, ಅಕ್ಕಮ್ಮ ಮುಧೋಳ, ರೇಣುಕಾ ಪತ್ತಾರ, ರಾಜೇಶ್ವರಿ, ಸುಮಂಗಲಾ ವಜ್ರಬಂಡಿ ಸೇರಿ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.