ADVERTISEMENT

ಕೊಪ್ಪಳ: ಕನ್ನಡ ವಿರೋಧಿ ಕಾರ್ಖಾನೆ ಮುಚ್ಚಿ

ದೊಡ್ಲ ಹಾಲಿನ ಡೇರಿಯ ತೆಲುಗು ಪ್ರೇಮ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 8:21 IST
Last Updated 13 ಸೆಪ್ಟೆಂಬರ್ 2020, 8:21 IST

ಕೊಪ್ಪಳ: ಜಿಲ್ಲೆಯ ದೊಡ್ಲ ಹಾಲಿನ ಡೈರಿಯಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ)ದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಬೂದಗುಂಪಾ ಹತ್ತಿರವಿರುವ ದೊಡ್ಲ ಹಾಲಿನ ಡೈರಿಯಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಾಲಿನ ಡೈರಿಯ ಯಾವುದೇ ರಶೀದಿ, ವಾಹನಗಳ ಸಾಗಾಣಿಕೆಗೆ ಬಳಸುವ ದಾಖಲೆಗಳು ಸೇರಿ ಇತ್ಯಾದಿಗಳನ್ನು ಕನ್ನಡದಲ್ಲಿ ಬಳಸದೇ ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಬಳಸುತ್ತಿರುವುದು ಕನ್ನಡಕ್ಕೆ ಮಾಡಿದ ಮಹಾದ್ರೋಹವಾಗಿದೆ ಎಂದು ಸಂಘಟನೆಯ ಮುಖಂಡರು ದೂರಿದ್ದಾರೆ.

ಕನ್ನಡನಾಡಿನ ನೆಲ, ಜಲವನ್ನು ಬಳಸಿಕೊಂಡು ನಿರ್ಮಾಣವಾಗಿರುವ ಡೈರಿಯು ಸ್ಥಳೀಯ ಕನ್ನಡಿಗರಿಗೆ ಉದ್ಯೋಗವಕಾಶಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡದೇ ಅನ್ಯರಾಜ್ಯದವರಿಗೆ ಉನ್ನತ ಹುದ್ದೆಗಳನ್ನು ನೀಡಿ, ಸ್ಥಳೀಯ ಕನ್ನಡಿಗರನ್ನು ಕೂಲಿ ಕೆಲಸಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಈ ಕುರಿತು ಅನೇಕ ಹೋರಾಟ ಮಾಡಿದರೂ ಅವರು ಕ್ಯಾರೆ ಅನ್ನುತ್ತಿಲ್ಲ. ಅಲ್ಲದೆ ಜಿಲ್ಲಾಡಳಿತ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅರಣ್ಯ ಇಲಾಖೆಯ ಜಾಗೆಯನ್ನು ಒತ್ತುವರಿ ಮಾಡಿಕೊಂಡು ಡೈರಿ ನಿರ್ಮಿಸಿದ್ದಾರೆ. ಡೈರಿಯ ಸುತ್ತಮುತ್ತಲೂ ಬೆಳೆದಿರುವ ಮರಗಳನ್ನು ಕಟ್ಟಿಗೆಗಳಿಗಾಗಿ ಕಡಿಯುವ ಮೂಲಕ ಪರಿಸರ ನಾಶ ಮಾಡುತ್ತಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಪಂಪಣ್ಣ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ಈ ಡೈರಿಯಲ್ಲಿ ತಯಾರಾಗುವ ಹಾಲಿನಲ್ಲಿ ಕೆಮಿಕಲ್‌ ಸೇರ್ಪಡೆಗೊಳಿಸುತ್ತಿದ್ದಾರೆ ಎಂಬ ಅನುಮಾನ ಇದೆ. ಇದರ ಬಗ್ಗೆ ತನಿಖೆಯಾಗಬೇಕಾಗಿದೆ ಎಂದು ಆಗ್ರಹಿಸಿದರು.

ಡೈರಿಯಲ್ಲಿಕನ್ನಡ ಬಳಕೆ ಮಾಡಬೇಕು, ಸ್ಥಳೀಯರಿಗೆ ಉದ್ಯೋಗ ನೀಡಬೇಕು,ಮರಗಳ ಮಾರಣಹೋಮ ಮಾಡುವುದನ್ನು ನಿಲ್ಲಿಸಬೇಕು. ಜಿಲ್ಲಾಧಿಕಾರಿ ಕೂಡಲೇ ಈ ದೊಡ್ಲ ಹಾಲಿನ ಡೈರಿಯ ಬಗ್ಗೆ ತನಿಖೆ ನಡೆಸಿ, ಶಿಸ್ತು ಕ್ರಮ ಜರುಗಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.