ADVERTISEMENT

ಪ್ರಧಾನಿ ಮೋದಿ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ: ದೇವೇಗೌಡರ ಕಿಡಿ

ಪರ್ಸೆಂಟೇಜ್‌ ಸರ್ಕಾರ ಟೀಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 12:43 IST
Last Updated 19 ಏಪ್ರಿಲ್ 2019, 12:43 IST
ಕೊಪ್ಪಳ ತಾಲ್ಲೂಕಿನ ಬಸಾಪುರದ ಖಾಸಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಪಕ್ಷದ ಮುಖಂಡ ಕೆ.ಎಂ.ಸಯ್ಯೀದ್‌ ಬರಮಾಡಿಕೊಂಡರು
ಕೊಪ್ಪಳ ತಾಲ್ಲೂಕಿನ ಬಸಾಪುರದ ಖಾಸಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಪಕ್ಷದ ಮುಖಂಡ ಕೆ.ಎಂ.ಸಯ್ಯೀದ್‌ ಬರಮಾಡಿಕೊಂಡರು   

ಕೊಪ್ಪಳ: ಮೋದಿಗಿಂತ ನಾನು ಚೆನ್ನಾಗಿ ಮಾತನಾಡಬಲ್ಲೆ. ಆದರೆ ನನಗೆ ಹಿಂದಿ ಸುಲಲಿತವಾಗಿ ಬರಲ್ಲ. ರಾಜ್ಯದ ಸರ್ಕಾರವನ್ನು ಪರ್ಸೆಂಟೇಜ್‌ ಸರ್ಕಾರ ಎಂದು ಹೇಳುವ ಪ್ರಧಾನಿ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಕಿಡಿದರು.

ವಿಜಯಪುರಕ್ಕೆ ತೆರಳುವ ಮಾರ್ಗ ಮಧ್ಯೆ ಕೊಪ್ಪಳ ತಾಲ್ಲೂಕಿನ ಬಸಾಪುರದ ಎಂಎಸ್‍ಪಿಎಲ್ ಬಲ್ಡೋಟಾ ವಿಮಾನ ನಿಲ್ದಾಣದಲ್ಲಿ ಇಳಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ,17 ರಾಜ್ಯಗಳಲ್ಲಿ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ಅಲ್ಲಿ ಅವರು ಪರ್ಸೆಂಟೇಜ್ ತೆಗೆದುಕೊಂಡು ಆಡಳಿತ ನಡೆಸುತ್ತಾರಾ? ಎಂದು ಪ್ರಶ್ನಿಸಿದ ಅವರು, ಇದನ್ನು ನಾನು ಪಾರ್ಲಿಮೆಂಟ್‍ನಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯಕ್ಕೆ ಸಮಸ್ಯೆ ಬಂದಾಗ ರೈತರ ಪರವಾಗಿ ಕಣ್ಣೀರು ಹಾಕಿದ್ದು ಹಾಗೂ ಹೋರಾಟ ಮಾಡಿದ್ದು ದೇವೇಗೌಡರ ಕುಂಟುಂಬ ಮಾತ್ರ. ಕಾವೇರಿ ಸಮಸ್ಯೆ ಬಂದಾಗ ಬಿಜೆಪಿಯವರಾಗಲಿ, ಕಾಂಗ್ರೆಸ್‍ನವರಾಗಲಿ ಕಣ್ಣೀರು ಹಾಕಲಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಅಷ್ಟು ಜನ ಮಂತ್ರಿಗಳಿದ್ದರೂ ಅವರು ಯಾರೂ ಸಹ ರೈತರ ಪರ ಹೋರಾಟ ಮಾಡಲಿಲ್ಲ. ಆಗ ದೇವೇಗೌಡರ ಕುಟುಂಬವೇ ರೈತರ ಪರವಾಗಿ ಕೆಲಸ ಮಾಡಿದ್ದು ಎಂದು ಹೇಳಿದರು.

ADVERTISEMENT

ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ನಾನು ಬಾಕಿ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದೇವೆ. ಈಗಾಗಲೇ ಮತದಾರರ ತೀರ್ಪು ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತದಾರರ ತೀರ್ಪನ್ನು ನಾವು ಒಪ್ಪಬೇಕು ಹಾಗೂ ಗೌರವಿಸಬೇಕು ಎಂದರು.

ವಿಮಾನ ನಿಲ್ದಾಣಕ್ಕೆ ಬಂದಿಳಿದ ದೇವೇಗೌಡರನ್ನು ಪಕ್ಷದ ಮುಖಂಡರಾದ ಕೆ.ಎಂ.ಸಯ್ಯೀದ್, ಮೌನೇಶ ವಡ್ಡಟ್ಟಿ, ವೀರನಗೌಡ, ಶಿವು ಮಹಾಂತಯ್ಯನಮಠ ಪುಷ್ಟಗುಚ್ಚ ನೀಡಿ ಸ್ವಾಗತಿಸಿದರು.

ಮೇಲೇರಿ ಕೆಳಗಿಳಿದ ಹೆಲಿಕಾಪ್ಟರ್: ಆತಂಕ

ದೇವೇಗೌಡರು ಇದ್ದ ಹೆಲಿಕಾಪ್ಟರ್ ತಾಂತ್ರಿಕ ಅಡಚಣೆಯಿಂದ ಟೇಕ್‍ಆಫ್ ಆಗಿ ಕೆಲ ಕ್ಷಣಗಳ ಬಳಿಕ ಲ್ಯಾಂಡ್ ಆದ ಘಟನೆ ಬಸಾಪುರದ ಖಾಸಗಿವಿಮಾನ ನಿಲ್ದಾಣದಲ್ಲಿ ನಡೆಯಿತು.

ದೇವೇಗೌಡರು ಖಾಸಗಿಚಾರ್ಟ್‌ರ್‌ ವಿಮಾನದಿಂದಬಂದಿಳಿದು, ವಿಶ್ರಾಂತಿ ಪಡೆದು, ವಿಜಯಪುರಕ್ಕೆ ತೆರಳಲು ಹೆಲಿಕಾಪ್ಟರ್ ಏರಿದರು. ಹೆಲಿಕಾಪ್ಟರ್ ಮೇಲೇರುತ್ತಿದ್ದಂತೆ ಪೈಲಟ್ ಏಕಾಏಕಿ ಹೆಲಿಕಾಪ್ಟರ್‌ ಅನ್ನು ಕೆಳಗಿಳಿಸಿದರು. ಇದರಿಂದಾಗಿ ಸ್ಥಳದಲ್ಲಿದ್ದ ಕಾರ್ಯಕರ್ತರು ಮತ್ತು ಪೊಲೀಸರಲ್ಲಿ ಕೆಲ ಕಾಲ ಆತಂಕ ಉಂಟಾಯಿತು.

ಇಬ್ಬರು ಪೈಲಟ್ ಸೇರಿದಂತೆ ಕೇವಲ ನಾಲ್ಕೇ ಜನ ಕೂರಬಹುದಾದ ಆ ಹೆಲಿಕಾಪ್ಟರ್‌ನಲ್ಲಿ ಹೆಚ್ಚಿನಭಾರ ಇದ್ದುದರಿಂದ ಪೈಲಟ್ ಈ ಕ್ರಮಕ್ಕೆ ಮುಂದಾದರು. ತಕ್ಷಣವೇ ಹೆಲಿಕಾಪ್ಟರ್‌ ಅನ್ನು ಕೆಳಗಿಳಿಸಿಅದರಲ್ಲಿ ಒಬ್ಬ ಅಂಗರಕ್ಷಕರನ್ನು ಕೆಳಗೆ ಇಳಿಸಲಾಯಿತು. ಪುನಃ ಹೆಲಿಕಾಪ್ಟರ್ ಮೇಲೆ ಏರಿತು. ಸ್ಥಳದಲ್ಲಿ ಇದ್ದ ಪಕ್ಷದ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.