ಕುಷ್ಟಗಿ: ‘ಶಿಕ್ಷಕರು, ಕೊಠಡಿ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳ ಕೊರತೆ ನೀಗಿಸುವ ಮೂಲಕ ತಾಲ್ಲೂಕಿನ ಶಾಲೆಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಯತ್ನಿಸುವೆ’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಯಲಬುಣಚಿ ಗ್ರಾಮದಲ್ಲಿ 2023-24ನೇ ಹಣಕಾಸು ವರ್ಷದ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯ ₹ 35.71 ಲಕ್ಷ ಖರ್ಚಿನಲ್ಲಿ ನಿರ್ಮಿಸಿದ ಪ್ರಾಥಮಿಕ ಶಾಲೆ ಎರಡು ಕೊಠಡಿಗಳು ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸರ್ಕಾರ ಎಲ್ಲ ಅನುಕೂಲಗಳನ್ನೂ ಕಲ್ಪಿಸುತ್ತದೆ. ಜತೆಗೆ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಪಾಲಕರು ಹಾಗೂ ಸಮಾಜ ಅಷ್ಟೇ ಕಾಳಜಿ ವಹಿಸುವುದೂ ಅಗತ್ಯ. ಶಾಲೆಗೆ ಪ್ರತ್ಯೇಕ ಕೊಳವೆಬಾವಿ ತೋಡಿಸಲು ಕ್ರಮಕೈಗೊಳ್ಳುತ್ತೇನೆ’ ಎಂದು ಹೇಳಿದರು.
ಶಾಲೆಗೆ ಭೂಮಿ ದಾನ ನೀಡಿದ ವೆಂಕಪ್ಪಯ್ಯ ಜಿ. ಸರದೇಸಾಯಿ ಮಾತನಾಡಿ, ‘ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಗ್ರಾಮಸ್ಥರು ಎಲ್ಲ ರೀತಿಯ ಸಹಕಾರ ನೀಡುತ್ತ ಬಂದಿದ್ದೇವೆ. ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಶಾಸಕರು ಮುತುವರ್ಜಿವಹಿಸಬೇಕಿದೆ’ ಎಂದು ಹೇಳಿದರು.
ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸೋಮನಗೌಡ ಪಾಟೀಲ ಮಾತನಾಡಿ, ‘96 ಜನ ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಕ್ಕೆ ಉಪನಿರ್ದೇಶಕರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮಂಜೂರಾತಿ ದೊರೆತ ನಂತರ ಯಲಬುಣಚಿ ಶಾಲೆಗೂ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಕೆಕೆಆರ್‌ಡಿಬಿ ಅನುದಾನದಲ್ಲಿ ಪೀಠೋಪಕರಣಗಳು ಈ ಶಾಲೆಗೆ ಬರಲಿವೆ’ ಎಂದು ಮಾಹಿತಿ ನೀಡಿದರು.
ಶಿಕ್ಷಣ ಸಂಯೋಜಕ ದಾವಲಸಾಬ್ ವಾಲಿಕಾರ ಮಾತನಾಡಿ, ‘ಹಬ್ಬ–ಹರಿದಿನಗಳಲ್ಲಿ ಮಕ್ಕಳು ವಾರಗಟ್ಟಲೇ ಶಾಲೆಗೆ ಗೈರಾಗುತ್ತಿರುವುದು ಕಂಡುಬರುತ್ತಿದೆ. ಇದರಿಂದ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಮರೆಯಬಾರದು’ ಎಂದು ಪಾಲಕರಲ್ಲಿ ಮನವಿ ಮಾಡಿದರು.
ಗ್ರಾ.ಪಂ ಅಧ್ಯಕ್ಷ ಹುಚ್ಚಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಬಂಗಿ, ಕೆಆರ್‌ಡಿಐಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇರ್ಫಾನ್ ಹಾಗೂ ಗ್ರಾಮದ ಹಿರಿಯರು, ಗ್ರಾ.ಪಂ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.