
ಕೊಪ್ಪಳ: ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ ಹಾಗೂ ಎಕ್ಸ್ ಇಂಡಿಯಾ ಕಾರ್ಖಾನೆಗಳ ವಿಸ್ತರಣೆಗೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸೋಮವಾರ 46 ದಿನಗಳನ್ನು ಪೂರ್ಣಗೊಳಿಸಿತು.
ದಳಪತಿ ಸಂಘದ ಅಧ್ಯಕ್ಷ ಶರಣಬಸನಗೌಡ ಹೊರಪೇಟೆ ಮಾತನಾಡಿ ‘ದೇಶ ಹಾಳಾದರೂ ಸರಿ ತಮ್ಮ ಕೋಶ ತುಂಬಬೇಕು ಎನ್ನುವ ರಾಜಕಾರಣಿಗಳಿದ್ದಾರೆ, ಜನಪರವಾಗಿ ನಿಲ್ಲಲು ನಿಷ್ಠುರತೆ ಬೇಕು. ಬೂದಿ, ಹೊಗೆ, ವಿಷಾನಿಲದಿಂದ ಬದುಕು ಹಾಳಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಮುಖಂಡ ಶರಣಗೌಡ ಪಾಟೀಲ ಮುದ್ದಾಬಳ್ಳಿ ಮಾತನಾಡಿ ‘ಕಂಪನಿಗಳಿಗೆ ಕಡಿವಾಣ ಹಾಕಬೇಕು, ಅವರ ಉಪಟಳ ವಿಪರೀತವಾಗಿದೆ, ಅಲ್ಲಿ ಕೆಲಸ ಮಾಡುವವರು ನಮ್ಮ ಜನರೇ ಅಲ್ಲ’ ಎಂದರು.
ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಕೆ.ಬಿ. ಗೋನಾಳ, ಮಂಜುನಾಥ ಗೊಂಡಬಾಳ, ಚಾರಣ ಬಳಗದ ಡಾ. ಶಿವಕುಮಾರ್ ಮಾಲಿಪಾಟೀಲ, ತಿಮ್ಮಣ್ಣ ಭೋವಿ ಬೆಂಕಿನಗರ, ವಿವಿಧ ಗ್ರಾಮದ ದಳಪತಿಗಳಾದ ದೊಡ್ಡನಗೌಡ ಮುದ್ದಲಗುಂದಿ, ಸಂಗಯ್ಯ ಕರ್ಕಿಹಳ್ಳಿ, ಬಾಲನಗೌಡ ಬೆನ್ನೂರು, ಕಲ್ಲನಗೌಡ ಮಾಸ್ತಿಕಟ್ಟಿ, ಉಮೇಶಗೌಡ ಹೂವಿನಹಾಳ, ಶರಣೇಗೌಡ ಮುದ್ದಾಬಳ್ಳಿ ರಮೇಶ ಬೋಚನಹಳ್ಳಿ ಸೇರಿ ಅನೇಕರು ಪಾಲ್ಗೊಂಡಿದ್ದರು.
ಮಹಿಳಾ ಸ್ವಸಹಾಯ ಸಂಘಗಳ ಬೆಂಬಲ
ಕೊಪ್ಪಳ: ಬಲ್ಡೋಟಾ ವಿಸ್ತರಣೆಗೆ ಅವಕಾಶ ಕೊಡಬೇಕು ಇಲ್ಲವೇ ನಮ್ಮ ಭೂಮಿ ವಾಪಸ್ ಕೊಡಬೇಕು ಎಂದು ಆಗ್ರಹಿಸಿ ಭೂಮಿ ಕಳೆದುಕೊಂಡವರು ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಮುಂದುವರಿದಿದೆ. ತಾಲ್ಲೂಕಿನ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಮಾತನಾಡಿ ‘ಪರಿಸರ ಸಂರಕ್ಷಣೆಗೆ ಬಲ್ಡೋಟಾ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಸಮಾಜಮುಖಿ ಕೆಲಸಗಳನ್ನು ಮಾಡಿದೆ’ ಎಂದರು. ಸ್ಥಳೀಯರಿಗೆ ಉದ್ಯೋಗದ ಅವಕಾಶ ದೊರೆಯುತ್ತವೆ ಎಂದು ಹೇಳಿದರು. ಸಂಘಗಳ ಸದಸ್ಯರಾದ ಲಲಿತಮ್ಮ ಮಮತಾ ಮಾಲಾ ರೈತ ಮುಖಂಡರಾದ ಕಾಮಣ್ಣ ಕಂಬಳಿ ನಾಗರಾಜ್ ಗುರಿಕಾರ ಪ್ರಾಣೇಶ್ ಮನೋಜ್ ಡಿ ಎಚ್ ದುರುಗಪ್ಪ ಭಾವಿಮನಿ ಸೇರಿ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.