
ಕೊಪ್ಪಳ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಕನಕಗಿರಿ ತಾಲ್ಲೂಕಿನ ಮುಸಲಾಪುರ ಗ್ರಾಮದಲ್ಲಿ ವೃದ್ಧರೊಬ್ಬರ ಬಳಿ ‘ಅನ್ನ ಸುವಿಧಾ ಯೋಜನೆ‘ ಬಗ್ಗೆ ಮಾಹಿತಿ ಪಡೆದರು
ಕೊಪ್ಪಳ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯದ ಅಡಿ ಪ್ರತಿತಿಂಗಳು ಪಡಿತರ ನೀಡಲಾಗುತ್ತಿದ್ದು, ನವೆಂಬರ್‌ನಿಂದ 75 ವರ್ಷ ಮೇಲಿನ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಸರ್ಕಾರ ‘ಅನ್ನ ಸುವಿಧಾ ಯೋಜನೆ‘ ಜಾರಿಗೆ ತಂದಿದೆ.
ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಯೋಜನೆ ಆರಂಭಿಸಿದ್ದು, 75 ವರ್ಷ ಮೇಲ್ಪಟ್ಟವರು ಹಾಗೂ ಮನೆಯಲ್ಲಿ ಕೇವಲ ಒಬ್ಬ ಅಥವಾ ಇಬ್ಬರು ಹಿರಿಯರಷ್ಟೇ ಇರುವ ಕುಟುಂಬಕ್ಕೆ ಮನೆ ಬಾಗಿಲಿಗೆ ಸಮೀಪದ ನ್ಯಾಯಬೆಲೆ ಅಂಗಡಿಯವರೇ ಪಡಿತರ ತಲುಪಿಸುತ್ತಾರೆ.
ಜಿಲ್ಲೆಯ ಆಯಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ವಾಸವಾಗಿರುವ 75ಕ್ಕಿಂತಲೂ ಹೆಚ್ಚು ವಯಸ್ಸಾದ ಹಿರಿಯ ನಾಗರಿಕರ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದ್ದು ಪ್ರಸ್ತುತ ಮಾಹಿತಿ ಪ್ರಕಾರ 1200ಕ್ಕಿಂತಲೂ ಹೆಚ್ಚು ಹಿರಿಯರು ಇದರ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯಿಂದಾಗಿ ಹಿರಿಯರು ನ್ಯಾಯಬೆಲೆ ಅಂಗಡಿಗಳಿಗೆ ಓಡಾಡದೆ ಮನೆಯಲ್ಲೇ ಕುಳಿತು ಪಡಿತರ ಪಡೆಯಲು ಸಾಧ್ಯವಾಗುತ್ತದೆ. ಮನೆ ಬಾಗಿಲಿಗೆ ಪಡಿತರ ನೀಡುವ ನ್ಯಾಯಬೆಲೆ ಅಂಗಡಿಯ ಮಾಲೀಕರಿಗೆ ಪ್ರತಿ ಕುಟುಂಬಕ್ಕೆ ರಾಜ್ಯ ಸರ್ಕಾರ ₹50 ಪಾವತಿ ಮಾಡುತ್ತದೆ.
ಈ ಕುರಿತು ಇದೇ ವರ್ಷ ಮೇನಲ್ಲಿ ಸರ್ಕಾರದಿಂದ ಆದೇಶವಾಗಿದ್ದು ಇದೇ ತಿಂಗಳಿಂದ ಅನುಷ್ಠಾನಕ್ಕೆ ಬಂದಿದೆ. ಯೋಜನೆಯ ಅನುಕೂಲ ಪಡೆದುಕೊಳ್ಳಲು ಅರ್ಹ ಹಿರಿಯ ನಾಗರಿಕರ ಮನೆಯಲ್ಲಿ ಯುವ ಸದಸ್ಯರು ವಾಸವಿರಬಾರದು. ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಪಡಿತರ ಕಾರ್ಡ್‌ಗೆ ಲಿಂಕ್ ಆಗಿರಬೇಕು ಎನ್ನುವ ನಿಯಮವಿದೆ.
ನೋಂದಣಿ ಹೇಗೆ: ಪ್ರತಿ ತಿಂಗಳ ಅಂತ್ಯದಲ್ಲಿ ಅರ್ಹ ಫಲಾನುಭವಿಗಳ ಪಡಿತರ ಕಾರ್ಡ್‌ಗೆ ಲಿಂಕ್ ಮಾಡಿಕೊಂಡ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಮಾಹಿತಿ ಕಳುಹಿಸಲಾಗುತ್ತದೆ. ನೋಂದಣಿ ಮಾಡಿಕೊಳ್ಳಲು ಮೊಬೈಲ್‌ನಲ್ಲಿಯೇ ಅವಕಾಶ ಇರಲಿದೆ. ಅಥವಾ ತಮ್ಮ ಸ್ಥಳೀಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿಯೂ ನೋಂದಾಯಿಸಿಕೊಳ್ಳಬಹುದು. ಅರ್ಹರಿಗೆ ಆಯಾ ತಿಂಗಳ 1ನೇ ತಾರೀಖಿನಿಂದ 5ರ ಒಳಗೆ ಸಮೀಪದ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪೂರೈಕೆಯಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಎಪಿಎಲ್ ಆದ 4600 ಬಿಪಿಎಲ್ ಕಾರ್ಡ್‌ಗಳು
ಕೊಪ್ಪಳ: ರಾಜ್ಯ ಸರ್ಕಾರ ಇತ್ತೀಚೆಗೆ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಿದ್ದು ಜಿಲ್ಲೆಯಲ್ಲಿ ಅರ್ಹವಲ್ಲದ 4600 ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿಸಿದೆ. ಅರ್ಹರಿದ್ದವರೂ ಬಿಪಿಎಲ್‌ನಿಂದ ಹೊರಗುಳಿದರೆ ದಾಖಲೆಗಳನ್ನು ಕೊಟ್ಟು ಮರಳಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅವಕಾಶವಿದೆ. ’ಈಗಾಗಲೇ ಎಲ್ಲ ಕಡೆಯಂತೆ ಜಿಲ್ಲೆಯಲ್ಲಿಯೂ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಮಾಡಲಾಗಿದೆ. ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ದಾಖಲೆಗಳೊಂದಿಗೆ 45 ದಿನಗಳ ಒಳಗೆ ಪುನರ್ ಪಡೆದುಕೊಳ್ಳಬಹುದು’ ಎಂದು ಆಹಾರ ಮತ್ತು ನಾಗರಿಕ ಸರಬರಾಜ ಇಲಾಖೆಯ ಹೆಚ್ಚುವರಿ ಉಪನಿರ್ದೇಶಕರೂ ಆದ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ತಿಳಿಸಿದರು.
ಹಿರಿಯರಿಗೆ ತಲುಪದ ಸೌಲಭ್ಯ
ಹಿರಿಯರಿಗೆ ಅನುಕೂಲ ಕಲ್ಪಿಸಲು ಈ ಯೋಜನೆ ಜಾರಿಗೆ ತಂದಿದ್ದರೂ ಜಿಲ್ಲೆಯಲ್ಲಿ ಕೆಲವು ಪಡಿತರದಾರರು ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸದ ಮಾಹಿತಿ ಬಹಿರಂಗವಾಗಿದೆ. ಗ್ಯಾರಂಟಿ ಅನುಷ್ಠಾನದ ಸದಸ್ಯರು ಜಿಲ್ಲೆಯ ವಿವಿಧೆಡೆ ಭೇಟಿ ನೀಡಿದಾಗ ಈ ವಿಷಯ ಗೊತ್ತಾಗಿದ್ದು ಕೆಲ ಪಡಿತರ ಅಂಗಡಿಯವರು ಮಾತ್ರ ನೀಡುತ್ತಿದ್ದು ಇನ್ನೂ ಕೆಲವರು ಕೊಡುತ್ತಿಲ್ಲ ಎನ್ನುವ ಅಂಶ ತಿಳಿದುಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ರೆಡ್ಡಿ ಶ್ರೀನಿವಾಸ ’ಸರ್ಕಾರ ಆಶಯದಂತೆ ಎಲ್ಲರಿಗೂ ಮನೆಬಾಗಿಲಿಗೆ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಅವರೊಂದಿಗೆ ಶೀಘ್ರದಲ್ಲಿಯೇ ಸಭೆ ನಡೆಸುವೆ’ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದೇ ನವೆಂಬರ್‌ನಿಂದ ‘ಅನ್ನ ಸುವಿಧಾ ಯೋಜನೆ‘ ಆರಂಭಿಸಲಾಗಿದೆ. ಅರ್ಹ ಫಲಾನುಭವಿಗಳ ಮನೆಗೆ ಪಡಿತರ ತಲುಪಿಸುವ ಬಗ್ಗೆ ಕಣ್ಗಾವಲು ವಹಿಸಲಾಗಿದೆ.ಸಿದ್ರಾಮೇಶ್ವರ, ಹೆಚ್ಚುವರಿ ಜಿಲ್ಲಾಧಿಕಾರಿ
ಹಿರಿಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಆರಂಭಿಸಿರುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅರ್ಹರಿಗೆ ತಲುಪಬೇಕು. ಇದರ ಬಗ್ಗೆ ನಿರಂತರವಾಗಿ ಪರಿಶೀಲಿಸಲು ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲೆಯ ಎಲ್ಲರಿಗೂ ಸೂಚಿಸಿದ್ದೇನೆ.ರೆಡ್ಡಿ ಶ್ರೀನಿವಾಸ, ಅಧ್ಯಕ್ಷ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.