ಕಾರಟಗಿ: ‘ಈಚೆಗೆ ಮಳೆ ಸುರಿದ ಕಾರಣ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೊಳವೆಬಾವಿಗಳಲ್ಲಿ ಎಂದಿನಂತೆ ನೀರು ಬರುತ್ತಿದೆ. 9 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇಲ್ಲಿಯವರೆಗೂ ತಾಲ್ಲೂಕಿನ ಎಲ್ಲೂ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ...’
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ ಯಾದವ ಅವರ ಮಾತುಗಳಿವು.
ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೂರಾರು ಗ್ರಾಮಗಳು, ಅಷ್ಟೇ ಸಂಖ್ಯೆಯ ಕ್ಯಾಂಪ್‌ಗಳಿವೆ. ತುಂಗಭದ್ರಾ ಕಾಲುವೆಗೆ ಮೇ 10ರ ವರೆಗೂ ನೀರು ಹರಿಸಿದ ಕಾರಣ ಸಮಸ್ಯೆಯಾಗಿರಲಿಲ್ಲ. ಈಗ ನೀರಿಗೆ ಕೊಳವೆಬಾವಿ ಮತ್ತಿತರ ಮೂಲಗಳನ್ನು ಆಶ್ರಯಿಸಲಾಗಿದೆ.
ತಾಲ್ಲೂಕಿನ ಹುಳ್ಕಿಹಾಳ ಕ್ಯಾಂಪ್, ಹಾಲಸಮುದ್ರ, ಬೂದಗುಂಪಾ, ಅಂಜೂರಿ ಕ್ಯಾಂಪ್ ಹಾಗೂ ತಾಮ್ರಪಲ್ಲಿ ಕ್ಯಾಂಪ್ ಸೇರಿ 9 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಗ್ರಾ.ಪಂ ಸೇರಿ ತಾಲ್ಲೂಕಿನ ಎಲ್ಲಾ ಅಧಿಕಾರಿಗಳಿಗೆ ಮೋಟರ್ ದುರಸ್ತಿಯಾದರೆ ತಕ್ಷಣ ದುರಸ್ತಿ ಮಾಡಿಸಬೇಕು. ನೀರು ಪೂರೈಕೆ ವೀಕ್ಷಣೆ ಮಾಡಬೇಕು. ಸಮರ್ಪಕ ನೀರು ಸರಬರಾಜು ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದು ತಾ.ಪಂ. ಇಒ ಲಕ್ಷ್ಮಿದೇವಿ ಹೇಳುತ್ತಾರೆ.
ಕೆಲವೆಡೆ ನಿರ್ಮಿಸಿರುವ ನೀರಿನ ತೊಟ್ಟಿಗಳು ತುಂಬಿ ಹರಿದರೂ ಬಂದ್ ಮಾಡುವ ಪರಿಪಾಟವೇ ಇಲ್ಲ. ಅನೇಕ ಕಡೆ ನೀರಿನ ತೊಟ್ಟಿಗಳು ಪಾಚಿಗಟ್ಟಿವೆ. ಒಂದೆಡೆ ನೀರು ವ್ಯರ್ಥವಾಗಿ ಹರಿಯುವುದು, ಇನ್ನೊಂದೆಡೆ ಕೆಲ ತಾಸುಗಳವರೆಗೆ ನೀರು ಬರುವುದು ಸಾಮಾನ್ಯವಾಗಿದೆ. ಇದರ ನಿರ್ವಹಣೆ ಆಗಬೇಕಿದೆ.
ಪಟ್ಟಣ ಸೇರಿದಂತೆ ಸುಮಾರು 40ಕ್ಕೂ ಅಧಿಕ ಗ್ರಾಮಗಳಿಗೆ ನೀರುಣಿಸುವ ಬಹುಗ್ರಾಮ ಯೋಜನೆಯ ಕೆರೆಯಲ್ಲಿ ನೀರಿನ ಸಂಗ್ರಹ ಇರುವುದರಿಂದ ಎಲ್ಲೆಡೆ ಸಮಸ್ಯೆಯಾಗಿಲ್ಲ. ಕೆರೆ ನಿರ್ವಹಣೆಗೆ ಆದ್ಯತೆ ನೀಡಬೇಕಿದೆ. ಇದಲ್ಲದೇ ಜೆಜೆಎಂ ಯೋಜನೆಯಡಿ ಬರಿ ಪೈಪ್‌ಲೈನ್‌ನಲ್ಲಿ ಅಳವಡಿಸಿದ್ದೇ ದೊಡ್ಡ ಸಾಧನೆ ಎನ್ನುವಂತಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಸಮಸ್ಯೆಯಾಗಬಹುದಾದ 9 ಗ್ರಾಮಗಳಿಗೆ ಪರ್ಯಾಯವಾಗಿ ನೀರೊದಗಿಸಲು ತಾಲ್ಲೂಕಾಡಳಿತ ಸನ್ನದ್ಧವಾಗಿದೆ.– ಲಕ್ಷ್ಮಿದೇವಿ, ತಾ.ಪಂ ಇಒ ಕಾರಟಗಿ
ಕೊಳವೆಬಾವಿ ಹಾಗೂ ಕೆರೆಯ ನೀರನ್ನು ಸೇರಿಸಿಯೇ ಬಿಡುತ್ತಿರುವುದರಿಂದ ಇಲ್ಲಿಯವರೆಗೂ ನೀರಿನ ಸಮಸ್ಯೆ ಇಲ್ಲ. ಆಗಾಗ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದ ರಾಮನಗರದತ್ತ ಅಧಿಕಾರಿಗಳ ಚಿತ್ತ ಇರಲಿ.– ಕೆಂಚಪ್ಪ ಅಂಗಡಿ, ರಾಮನಗರ
ನೀರಿನ ಪೂರೈಕೆ ಚೆನ್ನಾಗಿದೆ. ಮಳೆಯಾಗಿದ್ದರಿಂದ ತುಂಬಾ ಅನುಕೂಲವಾಗಿದೆ. ಆದರೂ ಗ್ರಾ.ಪಂಯ ಕೆಲ ವಾರ್ಡ್‌ಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ.– ಪಂಪಾಪತಿ ಭೋವಿ, ಸೋಮನಾಳ ಗ್ರಾಮ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.