ADVERTISEMENT

ತಾವರಗೇರಾ: ವಾರದಲ್ಲಿ 2–3 ದಿನಕ್ಕೊಮ್ಮೆ ನೀರು ಪೂರೈಕೆ

ಪೈಪ್ ಅಳವಡಿಕೆ ಕಾರ್ಯ ಮುಗಿದರೂ ಟ್ಯಾಂಕಿಗೆ ನೀರು ಸರಬರಾಜು ಕೊರತೆ

ಕೆ.ಶರಣಬಸವ ನವಲಹಳ್ಳಿ
Published 7 ಏಪ್ರಿಲ್ 2022, 4:11 IST
Last Updated 7 ಏಪ್ರಿಲ್ 2022, 4:11 IST
ಪಾಂಡುರಂಗ ನಗರದಲ್ಲಿರುವ ಕಿರು ನೀರು ಟ್ಯಾಂಕಿಗೆ ಪೈಪ್ ಅಳವಡಿಕೆ ಕಾಮಗಾರಿ ಕಾರ್ಯ ಮುಗಿದರೂ ನೀರು ಸರಬರಾಜು ಮಾಡುತ್ತಿಲ್ಲ
ಪಾಂಡುರಂಗ ನಗರದಲ್ಲಿರುವ ಕಿರು ನೀರು ಟ್ಯಾಂಕಿಗೆ ಪೈಪ್ ಅಳವಡಿಕೆ ಕಾಮಗಾರಿ ಕಾರ್ಯ ಮುಗಿದರೂ ನೀರು ಸರಬರಾಜು ಮಾಡುತ್ತಿಲ್ಲ   

ತಾವರಗೇರಾ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 18 ವಾರ್ಡ್‌ಗಳಿದ್ದು, ಸುಮಾರು 20 ಸಾವಿರ ಜನಸಂಖ್ಯೆಯಿದೆ. ಆದರೆ ಪಟ್ಟಣದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ನಿವಾಸಿಗಳು ಪರದಾಡುವಂತಾಗಿದೆ.

ಪಟ್ಟಣದ ಪಾಂಡುರಂಗ ನಗರದಲ್ಲಿ ಕಳೆದ ಒಂದು ವರ್ಷದ ಹಿಂದೆ ಕಿರು ನೀರು ಟ್ಯಾಂಕಿಗೆ ಕುಡಿಯುವ ನೀರು ಸರಬರಾಜು ಮಾಡಲು ಪೈಪ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ಸಮರ್ಪಕ ಸರಬರಾಜು ಮಾಡುತ್ತಿಲ್ಲ.

ಬೇಸಿಗೆ ಸಮಯದಲ್ಲಿ ದಾಹ ಹೆಚ್ಚಾಗಿದ್ದು, ಪಾಂಡುರಂಗನಗರದಲ್ಲಿ ಖಾಸಗಿ ಶುದ್ಧ ನೀರಿನ ಘಟಕದ ಹೆಚ್ಚುವರಿ ನೀರನ್ನೇ ನಾವು ಪಡೆಯುತ್ತಿದ್ದೇವೆ. ನೀರಿಗಾಗಿ ದೂರದ ಕೆರೆಗೆ ಹೋಗಬೇಕಾಗಿದೆ ಎಂದು ಸ್ಥಳೀಯ ರಾದ ಹನಮಂತಸಿಂಗ್ ಹೇಳಿದರು.

ADVERTISEMENT

ವಾರ್ಡ್‌ ಸಂಖ್ಯೆ 4, 14, 15, 16 ಹಾಗೂ ಬಸವಣ್ಣ ಕ್ಯಾಂಪ್‌ನ ಎಲ್ಲಾ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ತೊಂದರೆ ಮುಂದುವರೆದಿದೆ. ಸಾರ್ವಜನಿಕರು ವಾರಕ್ಕೆ ಒಂದು ದಿನ ಅಥವಾ ವಾರದಲ್ಲಿ 2 ದಿನ ಮಾತ್ರ ನೀರು ಪಡೆಯುತ್ತಿದ್ದಾರೆ.

2 ವರ್ಷದ ಹಿಂದೆ ಮನೆ ಮನೆಗೆ ನೀರು ಪೂರೈಕೆಗಾಗಿ ಅಂದಿನ ಪಟ್ಟಣ ಪಂಚಾಯಿತಿ ಸದಸ್ಯರು ಜನರಿಂದ ಹಣ ಪಡೆದಿದ್ದರು. ಆದರೆ ಪೈಪ್ ಅಳವಡಿಕೆ ಮುಗಿದಿದ್ದು, ಇಲ್ಲಿವರೆಗೆ ನೀರು ಮಾತ್ರ ಸಿಗದೇ ಪರದಾಡುವಂತಾಗಿದೆ. ಸದ್ಯ ನಮ್ಮ ವಾರ್ಡ್‌ಗೆ 3 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡುತ್ತಿಲಾಗುತ್ತಿದೆ. ಸಮಸ್ಯೆ ತಿಳಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಕರೆ ಮಾಡಿದರೂ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ಸ್ಥಳೀಯರಾದ ಅನ್ನಪೂರ್ಣ, ಶ್ಯಾಮೂರ್ತಿ ಹುನಗುಂದ ಹಾಗೂ ಅಯ್ಯಪ್ಪ ಓಲಿ ತಿಳಿಸಿದರು.

ಪಟ್ಟಣದಲ್ಲಿ ಒಟ್ಟು 1,600 ನಳಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಗರ್ಜಿನಾಳ ರ್ಸತೆ ಮತ್ತು ವಿಠಲಾಪೂರ ರಸ್ತೆ, ಸಿಂಧನೂರ ರಸ್ತೆಯಲ್ಲಿ ಕುಡಿಯುವ ನೀರು ಪೂರೈಸುವ 4 ಬೃಹತ್ ಟ್ಯಾಂಕ್‌ಗಳಿದ್ದು ಪ್ರತಿದಿನ 5.50 ಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತದೆ.

ಎಲ್ಲಾ ವಾರ್ಡ್‌ಗಳಲ್ಲಿ ಸಾರ್ವಜನಿಕ ನಳಗಳು ಮತ್ತು ಒಟ್ಟು 30 ಕ್ಕೂ ಹೆಚ್ಚು ಕಿರು ನೀರು ಸರಬರಾಜು ಟ್ಯಾಂಕ್‌ಗಳಲ್ಲಿ ಕುಡಿಯುವ ನೀರು ಸರಬರಾಜು ಇದ್ದರೂ ಸಹ ಪಟ್ಟಣದ 18 ವಾರ್ಡಗಳಿಗೆ ಕೇವಲ 4 ಜನ ನೀರು ನಿರ್ವಹಣೆ ಸಿಬ್ಬಂದಿ ನೇಮಕ ಮಾಡಿರುವ ಕಾರಣ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ತಿಳಿಸಿದರು.

ಶಾಸಕ ಅಮರೇಗೌಡ ಪಾಟೀಲ ಕಾಳಜಿಯಿಂದ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಈಗಾಗಲೇ ತುಂಗಾಭದ್ರಾ ಎಡದಂಡೆ ಕಾಲುವೆಯ ಮೂಲಕ ಪಟ್ಟಣಕ್ಕೆ ₹86.16 ಕೋಟಿ ವೆಚ್ಚದ ನೀರು ಸರಬರಾಜು ನೂತನ ಕಾಮಗಾರಿಗೆ ಚಾಲನೆ ನೀಡಿದ್ದು, ಇನ್ನೂ 6 ತಿಂಗಳು ಅಥವಾ 12 ತಿಂಗಳಲ್ಲಿ ಪೈಪಲೈನ್ ಮತ್ತು ಕಾಮಗಾರಿ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಸದ್ಯ ಪಟ್ಟಣಕ್ಕೆ ಜಲಮೂಲವಾದ ರಾಯನ ಕೆರೆ ನೀರಿನ ಸಂಗ್ರಹದ ಮೂಲಕ ಅಂತರ್ಜಲ ಹೆಚ್ಚಾಗಿದ್ದು, ಕೊಳವೆಬಾವಿ, ತೆರೆದ ಬಾವಿಗಳಲ್ಲಿ ನೀರು ಹೆಚ್ಚಿದೆ. ಆದರೂ ಸಹ ಜನಸಂಖ್ಯೆಗ ಅನುಗುಣವಾಗಿ ಎಲ್ಲಾ ವಾರ್ಡ್‌ಗಳಲ್ಲಿ ನೀರು ಪೂರೈಕೆಗೆ ಆಡಳಿತ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಮನವಿ.

*
ಬೇಸಿಗೆ ಸಮಯದಲ್ಲಿ ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ನೂತನ ಕಾಮಗಾರಿಗೆ ಚಾಲನೆ ನೀಡಿದ್ದು, ಪ್ರತಿ ವಾರ್ಡ್‌ಗೆ ಸಮರ್ಪಕ ನೀರು ಪೂರೈಕೆ ಮಾಡಲಾಗುವುದು
- ನಭೀಸಾಬ ಖುದನ್ನವರ, ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.