ADVERTISEMENT

ಕುಡಿಯುವ ನೀರಿಗೆ ಸಂಕಷ್ಟ: ಶುದ್ಧ ನೀರಿನ ಘಟಕ ದುರಸ್ತಿಗೆ ಆಗ್ರಹ

ಮನವಿಗೆ ಸ್ಪಂದಿಸದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 2:55 IST
Last Updated 11 ಜೂನ್ 2021, 2:55 IST
ಅಳವಂಡಿ ಸಮೀಪದ ಮುರ್ಲಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡುವಂತೆ ಅಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಅಳವಂಡಿ ಸಮೀಪದ ಮುರ್ಲಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡುವಂತೆ ಅಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಅಳವಂಡಿ: ಸಮೀಪದ ಮುರ್ಲಾಪುರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದೆ ಬಂದ್‌ ಆಗಿದ್ದು, ಹನಿ ಶುದ್ಧ ಕುಡಿಯುವ ನೀರಿಗೆ ಪರದಾಡುವಂತೆ ಆಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಆರಂಭವಾದಾಗಿನಿಂದ ಬಂದ್‌ ಆಗಿದ್ದೇ ಹೆಚ್ಚು. ಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮ 900 ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಕೊಳವೆಬಾವಿಯ ನೀರು ಕುಡಿಯಲು ಅಯೋಗ್ಯವಾಗಿರುವ ಹಿನ್ನೆಲೆಯಲ್ಲಿ 4 ವರ್ಷದ ಹಿಂದೆ ಘಟಕ ಆರಂಭಿಸಲಾಗಿದೆ.ಆರಂಭದಿಂದಲೂ ನಿತ್ಯ ಒಂದಿಲ್ಲೊಂದು ಒಂದು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಮಸ್ಯೆ ಕುರಿತುಗ್ರಾಮಸ್ಥರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಬಂದ್‌ ಆಗಿದ್ದರಿಂದ ನೀರು ತರಲು 4-5 ಕಿ.ಮೀ ಕ್ರಮಿಸಿ
ತರಬೇಕಿದೆ.

ADVERTISEMENT

ಕುಡಿಯುವ ನೀರು ತರಬೇಕು ಎಂದರೆ ಗ್ರಾಮದ ಸೀಮೆಯಲ್ಲಿರುವಕೆರೆಗೆ ಹೋಗಬೇಕು. ಕುಡಿಯುವ ನೀರಿಗಾಗಿ ಅಲೆದಾಡುವುದು ಮಾತ್ರ ತಪ್ಪುತ್ತಿಲ್ಲ ಎಂದು ಗ್ರಾಮಸ್ಥರು ಗೋಳಾಡುತ್ತಿದ್ದಾರೆ.

‘ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅದ್ಧೂರಿಯಾಗಿ ಆರಂಭಿಸುವ ಇಂತಹ ಘಟಕಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಅಧಿಕಾರಿಗಳು ಸರ್ಕಾರದ ಹಣವನ್ನು ಪೋಲು ಮಾಡಿ ಹಾಳುಗೆಡುವುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೂಡಾ ಇಲ್ಲ. ಅಶುದ್ಧ ನೀರಿನಿಂದ ಸಾಂಕ್ರಾಮಿಕ ರೋಗದ ಭೀತಿಯನ್ನು ಗ್ರಾಮೀಣ ಜನ ಎದುರಿಸುತ್ತಿದ್ದಾರೆ’ ಎಂದು ಗ್ರಾಮದಸುರೇಶ ಚನ್ನಳ್ಳಿ ಆರೋಪಿಸಿದರು.

‘ಗ್ರಾಮದಲ್ಲಿ ದಿನ ನಿತ್ಯ ಬಳಸಿಕೊಳ್ಳುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಶುದ್ಧ ನೀರಿನ ಘಟಕ ಕೆಟ್ಟಿರುವುದರಿಂದ ಇದರ ದುರಸ್ತಿ ಮಾಡಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರಿ ಸಂಬಂಧ ಪಟ್ಟವರಿಗೆ ದೂರವಾಣಿ ಕರೆ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ’ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

ಆದ್ದರಿಂದ ಗ್ರಾಮಕ್ಕೆ ಭೇಟಿನೀಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಯನ್ನು ತುರ್ತಾಗಿ ಮಾಡಿಸಬೇಕು. ಇಲ್ಲದಿದ್ದರೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಗ್ರಾಮಸ್ಥರಾದ ಹೊಳೆಯಪ್ಪ, ಸಿದ್ದಯ್ಯ, ರಮೇಶ, ಕಳಕಪ್ಪ, ವಿನೋದ, ಮಹಾಂತೇಶ, ಸೋಮಪ್ಪ, ಶಿವರಡ್ಡಿ ಮೇಗಳಮನಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.