ADVERTISEMENT

ಸಿದ್ದರಾಮಯ್ಯ ಅವರಿಂದ ಈಡಿಗ ಸಮಾಜಕ್ಕೆ ಅನ್ಯಾಯ: ಪ್ರಣಾವನಂದ ಸ್ವಾಮೀಜಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:10 IST
Last Updated 23 ಜನವರಿ 2026, 8:10 IST
ಗಂಗಾವತಿ ನಗರರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಈಡಿಗ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರವರೆಗಿನ ಪಾದಯಾತ್ರೆ ಕಾರ್ಯ‌ಕ್ರಮದಲ್ಲಿ ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಮಾತನಾಡಿದರು
ಗಂಗಾವತಿ ನಗರರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಈಡಿಗ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರವರೆಗಿನ ಪಾದಯಾತ್ರೆ ಕಾರ್ಯ‌ಕ್ರಮದಲ್ಲಿ ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಮಾತನಾಡಿದರು   

ಗಂಗಾವತಿ: ‘ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ರಾಜ್ಯ ಸರ್ಕಾರದ ಬಹುತೇಕ ಸಚಿವ‌ರು ಈಡಿಗ ಸಮಾಜವನ್ನು ಕಡೆಗಣಿಸಿ ಅನ್ಯಾಯ ಮಾಡಿದ್ದಾರೆ. ಇನ್ನುಳಿದ ಎರಡೂವರೆ ವರ್ಷದ ಅವಧಿಯಲ್ಲಿ ಈಡಿಗ ಸಮಾಜದ ಬೇಡಿಕೆಗಳು ಈಡೇರಿಸದಿದ್ದರೆ ಮುಂದಿನ ಕಾಂಗ್ರೆಸ್ ನಾಯಕರಿಗೆ ಈಡಿಗ ಸಮಾಜ ತಕ್ಕಪಾಠ ಕಲಿಸಲಿ‌ದೆ’ ಎಂದು ಈಡಿಗ ಸಮಾಜದ ಗುರು ಪ್ರಣಾವನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿಗೆ ಬುಧವಾರ ಸಂಜೆ ಆಗಮಿಸಿದ ಈಡಿಗ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರವರೆಗಿನ ಪಾದಯಾತ್ರೆ ಕಾರ್ಯ‌ಕ್ರಮದ ನಿಮಿತ್ತ ನಡೆದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

‘ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಸಿದ್ದರಾಮಯ್ಯ ಅವರು ನಮ್ಮ ಈಡಿಗ ಸಮುದಾಯದ ಕುಲಕಸುಬು ಬಂದ್ ಮಾಡಿ, ಸಮಾಜಕ್ಕೆ ದುಡಿಮೆ ಇಲ್ಲದಂತೆ ಮಾಡಿದ್ದಾರೆ. ಆದರೆ ಸರ್ಕಾರಗಳು ಈವರೆಗೆ ಬದುಕಿಗೆ ಯಾವ ಮೂಲವು ತೋರಿಸಿಲ್ಲ. ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದರೂ ಯಾವುದೇ ನ್ಯಾಯ ಒದಗಿಸಿಲ್ಲ’ ಎಂದರು.

ADVERTISEMENT

‘ಹಲವು ವರ್ಷಗಳಿಂದ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದು, ಈವರೆಗೆ ಸರ್ಕಾರ
ಸ್ಪಂದನೆ ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಬಂಗಾರಪ್ಪನಂತಹ ನಾಯಕರನ್ನು ತುಳಿಯಿತು. ಈಗ ನಮ್ಮ ಸಮಾಜದ ಜನಪ್ರತಿನಿಧಿಗಳಿಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದೆ. ಹಾಗಾಗಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕಲುಬುರಗಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೆವೆ’ ಎಂದು ತಿಳಿಸಿದರು.

‘ಬೇಡಿಕೆಗಳ ಈಡೇರಿಕೆಯ ಪಾದಯಾತ್ರೆ ಹಮ್ಮಿಕೊಂಡು ಗಂಗಾವತಿಗೆ ಬಂದಿದ್ದು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ವಾಗತಿಸಲು ಬಂದಿಲ್ಲ. ನಮಗೆ ಬೆಂಬಲವೂ ನೀಡಲಿಲ್ಲ. ತಂಗಡಗಿ ಸಚಿವರಾಗಲೂ ನಮ್ಮ ಸಮಾಜದ ಬೆಂಬಲವಿದೆ. ಅಧಿಕಾರದ‌ ಮಧದಿಂದ ನಮ್ಮ ಸಮಾಜವನ್ನು ಕಡೆಗಣಿಸಿದ್ದಾರೆ. ನಾವು ಯಾವ ಸಚಿವ, ಶಾಸಕರ ಅವಲಂಬನೆಗಾಗಿ ಕಾಯುತ್ತಿಲ್ಲ. ನಮ್ಮ ಸಮಾಜದ ಬೇಡಿಕೆಗಳು ಈಡೇರಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ’ ಎಂದರು.

‘ನಾವು ಮಾಡುವ ಪಾದಯಾತ್ರೆಯುದ್ದಕ್ಕೂ ಬೇರೆ ಸಮುದಾಯ ನಮಗೆ ತುಂಬಾ ಬೆಂಬಲ ನೀಡುತ್ತಿದೆ. ಗಂಗಾವತಿಯಲ್ಲಿ ಈಡಿಗ ಸಮಾಜದ ಜೊತೆಗೆ ಬೇರೆ ಸಮಾಜದವರು ನಮ್ಮ ಪಾದಯಾತ್ರೆಯನ್ನು ಅಭೂತಪೂರ್ವವಾಗಿ ಸ್ವಾಗತಿಸಿ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಅವರೆಲ್ಲರಿಗೂ ನಾವು ಅಭಿನಂದಿಸುತ್ತೇವೆ’ ಎಂದರು.

ವಿಧಾನ ಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ ಮಾತನಾಡಿ, ‘ಸ್ವಾಮೀಜಿಗಳ ಹೋರಾಟವನ್ನು ಸರ್ಕಾರ ಮತ್ತು ಸಚಿವರು ಗಂಭೀರವಾಗಿ ಪರಿಗಣಿಸಿ, ನಮ್ಮ ಸಮಾಜದ ಜೊತೆಗೆ ಇನ್ನಿತರ ಸಮಾಜಗಳ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಸ್ವಾಮಿಗಳು ಪಾದಯಾತ್ರೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಇದಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಸುತ್ತದೆ ಎಂಬ ಭರವಸೆ ಇದೆ. ನಮ್ಮ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ವಾಮೀಜಿ ಬೇಡಿಕೆ ಬಗ್ಗೆ ನಿರ್ಲಕ್ಷ್ಯ ಮಾಡಿರುವುದು ಗೊತ್ತಾಗಿದೆ. ನಮ್ಮ ಸಮಾಜವನ್ನು ತುಳಿಯುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ‘ಪಂಚಮಸಾಲಿ ಸಮಾಜದ ನಮ್ಮ ಗುರುಗಳಾದ ಜಯಮೃತ್ಯುಂಜಯ ಶ್ರೀಗಳ ಪಾದಯಾತ್ರೆಗೆ ಪ್ರಣವಾನಂದ ಶ್ರೀಗಳು ಬೆಂಬಲಿಸಿದ್ದಾರೆ. ಸರ್ವ ಸಮಾಜಕ್ಕೆ ಈಡಿಗ ಸಮಾಜದ ಸ್ವಾಮೀಜಿ ಒಳಿತು ಬಯಸುತ್ತಿದ್ದಾರೆ. ಸರ್ಕಾರ ಅವರ ಬೇಡಿಕೆಗೆ ಮನ್ನಣೆ ನೀಡಬೇಕು’ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸತೀಶ ಗುತ್ತೆದಾರ, ಗಿರೇಗೌಡ, ತಿಪ್ಪೆರುದ್ರಸ್ವಾಮಿ, ಜೋಗದ ನಾರಾಯಣಪ್ಪ ನಾಯಕ, ಕಳನಗೌಡ, ರವಿಂದ್ರ ಮಾಂತಗೊಂಡ, ಸೋಮನಾಥ ಪಟ್ಟಣಶೆಟ್ಟಿ, ಮೌನೇಶ ದಢೇಸೂಗೂರ, ಪರಮೇಶ, ಮುಸ್ಟೂರ ರಾಜಶೇಖರ, ರಮೇಶ ಗೌಳಿ, ಸುರೇಶ ಗೌರಪ್ಪ, ಈಡಿಗ ಸಮಾಜದ ಅಧ್ಯಕ್ಷ ನಾಗರಾಜ, ಮಲ್ಲಿಕಾರ್ಜುನ ಬಿಚ್ಚಾಲಿ, ಪರಮೇಶ ಉಪಸ್ಥಿತರಿದ್ದರು.

‘ಈಡಿಗ ಸಮಾಜದ ಬೇಡಿಕೆಗೆ ಸಚಿವ ತಂಗಡಗಿ ನಿರ್ಲಕ್ಷ್ಯ’

ಗಂಗಾವತಿ: ‘ಈಡಿಗ ಬಿಲ್ಲವ ಸೇರಿ 26 ಸಮಾಜಗಳ ವಿವಿಧ ಬೇಡಿಕೆಗಳು ಈಡೇರಿಕೆಗಾಗಿ ಈಡಿಗ ಸಮಾಜದ ಗುರು ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ವಾಗತಕ್ಕೆ ಬಾರದೇ ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರು ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಪ್ರಣವಾನಂದ ಶ್ರೀಗಳು ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ನ್ಯಾಯಯುತ ಬೇಡಿಕೆಗಳಿಗಾಗಿ 700 ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆ ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೌಜನ್ಯಕ್ಕಾದರೂ ಭೇಟಿ ಮಾಡದಿರುವುದು ಸಮುದಾಯದ ಜನರನ್ನು ಕಡೆಗಣಿಸಿದ್ದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.