ADVERTISEMENT

ಗಂಗಾವತಿ: ವಿವಿಧೆಡೆ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 13:06 IST
Last Updated 3 ಮೇ 2022, 13:06 IST
ಗಂಗಾವತಿ ನಗರದ ವಾಲ್ಮೀಕಿ ವೃತ್ತದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ ಮುಸ್ಲಿಂ ಸಮಾಜದವರಿಗೆ ಶುಭಾಶಯ ಕೋರಿದರು
ಗಂಗಾವತಿ ನಗರದ ವಾಲ್ಮೀಕಿ ವೃತ್ತದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ ಮುಸ್ಲಿಂ ಸಮಾಜದವರಿಗೆ ಶುಭಾಶಯ ಕೋರಿದರು   

ಗಂಗಾವತಿ: ನಗರದಲ್ಲಿ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಈದ್ ಉಲ್‌ ಫಿತ್ರ್‌ ಆಚರಿಸಿದರು.

ಶ್ವೇತವಸ್ತ್ರ ಧರಿಸಿ ಗುಂಪು ಗುಂಪಾಗಿ ಬಂದ ಮುಸ್ಲಿಮರು ಮೊದಲು ಸಿಹಿ ಹಂಚಿ, ಪರಸ್ಪರ ಆಲಿಂಗಿಸಿಕೊಂಡು ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಜಯನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯಲ್ಲಿ ಯುವಕರು, ಚಿಣ್ಣರು, ವೃದ್ಧರು ಸೇರಿ ಒಟ್ಟು 10 ಸಾವಿರಕ್ಕೂ ಹೆಚ್ಚಿನ ಜನ ಸೇರಿದ್ದರು.

ADVERTISEMENT

ಹಬ್ಬದ ನಿಮಿತ್ತ ನಗರವೆಲ್ಲ ಶ್ವೇತ ವಸ್ತ್ರಧಾರಿಗಳಿಂದ ಕಂಗೊಳಿಸುತ್ತಿತ್ತು. ಚಿಣ್ಣರು ಹೊಸ ಮತ್ತು ಸಾಂಪ್ರದಾಯಿಕ ಬಟ್ಟೆಗಳನ್ನು ತೊಟ್ಟಿ ಬಂದಿರುವುದು ವಿಶೇಷವಾಗಿತ್ತು.

ಈದ್‌ ಉಲ್‌ ಫಿತ್ರ್‌ ಕಾರಣಕ್ಕೆ ನಗರದಲ್ಲಿನ ಮಸೀದಿಗಳ ಬಳಿ, ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ನಗರದ ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರಕ್ಕೆ ತೊಡಕು ಆಗದಂತೆ, ಪರ್ಯಾಯ ರಸ್ತೆಗಳ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ನಗರ ಠಾಣೆಯ ಪಿಐ ಟಿ.ವೆಂಕಟಸ್ವಾಮಿ ಸೇರಿದಂತೆ ಇತರೆ ಅಧಿಕಾರಿಗಳಿಗೆ ಮುಸ್ಲಿಂ ಸಮಾಜದವರು ಶುಭಾಶಯ ಕೋರಿದರು.

ಮನೆಗಳಲ್ಲಿ ವಿಶೇಷ ಭೋಜನ: ತಿಂಗಳ ಪೂರ್ತಿ ಉಪವಾಸ ಆಚರಿಸಿದ್ದ ಮುಸ್ಲಿಮರಿಗೆ ಶ್ಯಾವಿಗೆ, ವಿಶೇಷ ಸಿಹಿ ತಿಂಡಿ, ಬಗೆ ಬಗೆಯ ಮಾಂಸಾಹಾರದ ತಿಂಡಿಗಳನ್ನು ಸಿದ್ಧಪಡಿಸಿ ಸವಿದರು. ಹಾಗೇಯೆ ಸ್ನೇಹಿತರು, ಸಂಬಂಧಿಕರನ್ನು ಮನೆಗೆ ಕರೆಯಿಸಿ ಉಣಬಡಿಸಿದರು.

ಈದ್‌ ಉಲ್‌ ಫಿತ್ರ್‌ ಅಂಗವಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಸಮಾಜದವರಿಗೆ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್.ಆರ್. ಶ್ರೀ‌ನಾಥ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.