ADVERTISEMENT

ಟಿಕೆಟ್‌ಗೆ ಯುವಕರ ಪೈಪೋಟಿ

ಕುಕನೂರು ಪಟ್ಟಣ ಪಂಚಾಯಿತಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:20 IST
Last Updated 4 ಡಿಸೆಂಬರ್ 2021, 2:20 IST
ಕುಕನೂರು ಪಟ್ಟಣ ಪಂಚಾಯಿತಿ
ಕುಕನೂರು ಪಟ್ಟಣ ಪಂಚಾಯಿತಿ   

ಕುಕನೂರು: ಪಟ್ಟಣ ಪಂಚಾಯಿತಿ ಚುನಾವಣೆಯ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ವಿವಿಧ ರಾಜಕೀಯ ಪಕ್ಷಗಳ ಚಟುವಟಿಕೆಗಳಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ. ಈ ಚುನಾವಣೆಗೆ ವಿವಿಧ ಪಕ್ಷಗಳ ಯುವಕರ ಪಡೆಯೇ ಸಜ್ಜಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಪಟ್ಟಣದಲ್ಲಿ ಒಟ್ಟು 19 ವಾರ್ಡ್‌ಗಳಿದ್ದು, ಈ ಎಲ್ಲಾ ವಾರ್ಡುಗಳಿಗೆ ಜು. 20ರಂದು ಮೀಸಲಾತಿ ನಿಗದಿಯಾಗಿತ್ತು. ಆದರೆ, ನಾನಾ ಕಾರಣಗಳಿಂದಾಗಿ ಚುನಾವಣೆ ಮುಂದೂಡಲಾಗಿತ್ತು. ಇತ್ತೀಚೆಗೆ ಹೈಕೋರ್ಟ್ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ನ.29ರಂದು ಚುನಾವಣಾ ಆಯೋಗವು ಡಿ.27ಕ್ಕೆ ಚುನಾವಣಾ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ.
ವಿವಿಧ ವಾರ್ಡ್‌ಗಳಿಗೆ ಸ್ಪರ್ಧಿಸಲು ಆಕಾಂಕ್ಷಿಗಳು ರಾಜಕೀಯ ಮುಖಂಡರ ಬೆನ್ನಿಗೆ ಬಿದ್ದು ತೆರೆ ಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ವಾರ್ಡ್‌ನಲ್ಲಿ ತಮ್ಮ ಬೆಂಬಲಿಗರನ್ನು ಕರೆದುಕೊಂಡು ಮುಖಂಡರ ಸುತ್ತ ಗಿರಕಿ ಹೊಡೆಯುತ್ತಿದ್ದಾರೆ. ಅಭಿವೃದ್ಧಿಗಿಂತ ಹೆಚ್ಚಾಗಿ ಜಾತಿ ಲೆಕ್ಕಾಚಾರದಲ್ಲಿ ತೊಡಗಿ ಮನೆ ಮನೆಗೆ ತೆರಳುತ್ತಿರುವ ಟಿಕೆಟ್‌ ಆಕಾಂಕ್ಷಿಗಳು ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಬೆಂಬಲ ಕೇಳುತ್ತಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯಕರ್ತರು, ಮುಖಂಡರು ಟಿಕೆಟ್ ಗಿಟ್ಟಿಸಿಕೊಳ್ಳಲು ಬೆಂಬಲಿಗರ ಸಮ್ಮುಖದಲ್ಲಿ ಪಕ್ಷಾಂತರ ಪರ್ವ ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆಗೆ ಇನ್ನಷ್ಟು ಕಾರ್ಯಕರ್ತರು ಪಕ್ಷಾಂತರಗೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಹಾಲಿ - ಮಾಜಿ ಸಚಿವರಿಬ್ಬರೂ ವಿಧಾನ ಪರಿಷತ್ ಚುನಾವಣೆಯಲ್ಲಿ ನಿರತರಾಗಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಳ್ಳುವುದು ತಡವಾಗಲಿದೆ ಎನ್ನಲಾಗಿದೆ.

ADVERTISEMENT

ಎಲ್ಲ ಪಕ್ಷಗಳ ಮುಖಂಡರು ತಮ್ಮ ನಾಯಕರ ಜತೆ ಗುರುತಿಸಿಕೊಂಡು ತಮ್ಮ ವಾರ್ಡ್‌ಗಳಲ್ಲಿ ಹೆಚ್ಚಿನ ಮತ ಕೊಡಿಸಲು ಶ್ರಮಿಸುತ್ತಾ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದರು. ಇದೇ ಸಂದರ್ಭದಲ್ಲಿಯೇ ತುಪ್ಪ ಜಾರಿ ರೊಟ್ಟಿಗೆ ಬಿದ್ದಂತೆ ಚುನಾವಣೆ ದಿನಾಂಕ ಪ್ರಕಟಗೊಂಡಿದೆ. ಮತದಾರರ ಒಲೈಕೆಗೆ ಕಸರತ್ತು ಶುರುವಾಗಲಿದೆ.

ಇಲ್ಲಿ ಬಿಜೆಪಿ ಶಾಸಕರಿದ್ದಾರೆ. ಪಟ್ಟಣ ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯುವುದು ಶಾಸಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಶಾಸಕರಿಗೆ ಸಹಕಾರ ಸಿಗಬೇಕಾದರೆ ಸ್ಥಳೀಯ ಸಂಸ್ಥೆಗಳಲ್ಲೂ ಅವರದೇ ಪಕ್ಷ ಅಧಿಕಾರದಲ್ಲಿಬೇಕು. ಇದರ ಜತೆಗೆ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಅವರಿಗೆ ಸ್ಥಳೀಯ ಸಂಸ್ಥೆಗಳ ಗೆಲುವು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.