ADVERTISEMENT

ಗಂಗಾವತಿ | ರಸ್ತೆಗೆ ಉರುಳಿದ ವಿದ್ಯುತ್ ಕಂಬ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 6:30 IST
Last Updated 3 ಜೂನ್ 2022, 6:30 IST
ರಸ್ತೆಗೆ ಉರುಳಿದ ವಿದ್ಯುತ್ ಕಂಬ
ರಸ್ತೆಗೆ ಉರುಳಿದ ವಿದ್ಯುತ್ ಕಂಬ   

ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾಮದ ಸಮೀಪ ಕಳೆದ ರಾತ್ರಿ ಸುರಿದ ಮಳೆಗೆ ಶುಕ್ರವಾರ ಬೆಳಿಗ್ಗೆ ವಿದ್ಯುತ್ ಕಂಬ ತುಂಡಾಗಿ ರಸ್ತೆ ಮೇಲೆ ನೆಲಕ್ಕುರುಳಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ.

ಸಾಣಾಪುರ ಗ್ರಾಮದಿಂದ ವಿರುಪಾಪುರಗಡ್ಡೆ ಗ್ರಾಮದ ವರೆಗಿನ ವಿಜಯನಗರ ಕಾಲುವೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಅದರ ಸಮೀಪವೇ ವಿದ್ಯುತ್ ಕಂಬ ನೆಲಕ್ಕೆ ಉರುಳಿದೆ.

ಅದೇ ಸಮಯದಲ್ಲಿ ಗಂಗಾವತಿ ನಗರದ ಕಡೆಯಿಂದ ಹುಲಿಗಿ ಗ್ರಾಮಕ್ಕೆ ಸಾರಿಗೆ ಇಲಾಖೆಯ ಬಸ್ಸೊಂದು ಸಂಚರಿಸುತ್ತಿದ್ದು, ಚಾಲಕನ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ADVERTISEMENT

ವಿದ್ಯುತ್ ಕಂಬ ಉರುಳುತ್ತಿದ್ದಂತೆ, 100 ಮೀಟರ್ ಅಂತರದಲ್ಲಿ ಬಸ್ ನಿಲ್ಲಿಸಿ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಈ ಕುರಿತು ಸ್ಥಳೀಯರು ಗಂಗಾವತಿ ಕೆ.ಇ.ಬಿ ಘಟಕಕ್ಕೆ ಕರೆ ಮಾಡಿ ವಿದ್ಯುತ್ ಕಂಬ ಉರುಳಿದ ಮಾಹಿತಿ ನೀಡಿದ ಕೂಡಲೆ ವಿದ್ಯುತ್ ಸಂಪರ್ಕ ಕಡಿತ ಮಾಡಿದರು. ಕೆಲ ಹೊತ್ತು ವಾಹನಗಳ ಸಂಚಾರ ಸ್ಥಗಿತವಾಗಿತ್ತು.

ಘಟನಾ ಸ್ಥಳಕ್ಕೆ ಲೈನ್ ಮನ್‌ಗಳು ಬಂದು ತುಂಡಾದ ಕಂಬ, ವೈರ್ ಗಳನ್ನು ಸ್ಥಳಾಂತರಿಸಿದರು‌. ಈ ವೇಳೆ ಸ್ಥಳೀಯರು, ಕಾಲುವೆ ಕಾಮಗಾರಿ ಕೆಲಸಗಾರರು, ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕ, ಸಾಣಾಪುರ ಗ್ರಾಮಸ್ಥರು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.