ADVERTISEMENT

ಸಮಯ ಬದಲಾದರೂ ಬದಲಾಗದ ನೌಕರರು

ಕೆಲ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಸಿಬ್ಬಂದಿ, ಉಳಿದೆಡೆ ಝಗಮಗಿಸಿದ ವಿದ್ಯುತ್‌ ದೀಪಗಳು

ಪ್ರಮೋದ
Published 4 ಏಪ್ರಿಲ್ 2025, 6:36 IST
Last Updated 4 ಏಪ್ರಿಲ್ 2025, 6:36 IST
ಕೊಪ್ಪಳದ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ 8.20ಕ್ಕೆ ಖಾಲಿಖಾಲಿಯಗಿದ್ದ ಚಿತ್ರಣ
ಕೊಪ್ಪಳದ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ 8.20ಕ್ಕೆ ಖಾಲಿಖಾಲಿಯಗಿದ್ದ ಚಿತ್ರಣ   

ಕೊಪ್ಪಳ: ಜಿಲ್ಲೆಯಲ್ಲಿ ವ್ಯಾಪಕ ಬಿಸಿಲಿರುವ ಕಾರಣ ಸರ್ಕಾರಿ ನೌಕರರ ಅನುಕೂಲಕ್ಕಾಗಿ ದೈನಂದಿನ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಜಿಲ್ಲಾಕೇಂದ್ರದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಬಹಳಷ್ಟು ನೌಕರರು ಮೊದಲ ದಿನವಾದ ಗುರುವಾರ ಕಚೇರಿ ಸಮಯ ಆರಂಭವಾದ ನಂತರ ಬಂದರು.

ಮೊದಲು ಬೆಳಿಗ್ಗೆ 10.30ರಿಂದ ಸಂಜೆ 5.30ರ ತನಕ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಬದಲಾವಣೆ ಪ್ರಕಾರ ಏಪ್ರಿಲ್‌ ಹಾಗೂ ಮೇ ತಿಂಗಳಗಳ ಮಟ್ಟಿಗೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ತನಕ ಮಾತ್ರ ಕಚೇರಿ ಸಮಯ ನಿಗದಿ ಮಾಡಲಾಗಿದೆ. ಈ ಕುರಿತು ಬುಧವಾರ ಮಧ್ಯಾಹ್ನ ಸರ್ಕಾರದ ಆದೇಶ ಹೊರಬಿದ್ದಿದ್ದರೂ ಗುರುವಾರದಿಂದ ಅನುಷ್ಠಾನಕ್ಕೆ ಬಂದಿದೆ.

ಸಮಯ ಬದಲಾವಣೆಗೆ ನೌಕರರ ಸ್ಪಂದನೆ ಹೇಗಿದೆ ಎನ್ನುವುದನ್ನು ‘ಪ್ರಜಾವಾಣಿ’ ಪ್ರತಿನಿಧಿ ಜಿಲ್ಲಾಡಳಿತ ಭವನ ಮತ್ತು ಹೊರಗಡೆ ಇರುವ ಸರ್ಕಾರಿ ಕಚೇರಿಗಳಲ್ಲಿ ಪರಿಶೀಲಿಸಿದಾಗ ಬಹುತೇಕ ಕಡೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಇರಲಿಲ್ಲ. ಬೆಳಿಗ್ಗೆ 8.20ರ ಸುಮಾರಿಗೆ ತೋಟಗಾರಿಕಾ ಇಲಾಖೆ ಒಂದು ಬಾಗಿಲು ಮಾತ್ರ ತೆರೆದಿತ್ತು. ಬಳಿಕ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ ಹೀಗೆ ಬಹಳಷ್ಟು ಇಲಾಖೆಗಳಲ್ಲಿ ಬೆರಳೆಣಿಕೆಯಷ್ಟೇ ಸಿಬ್ಬಂದಿಗಳಿದ್ದರು. ಬೆಳಿಗ್ಗೆ 9.30 ಆದರೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯ ಬಾಗಿಲನ್ನೇ ತೆರೆದಿರಲಿಲ್ಲ. ಜಿಲ್ಲಾಡಳಿತ ಭವನದ ಒಳಭಾಗದಲ್ಲಿ ಕೆಲವೆಡೆ ಕಸವನ್ನೂ ಬಳೆದಿರಲಿಲ್ಲ.

ADVERTISEMENT

ಇವೆಲ್ಲವುಗಳ ನಡುವೆ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆಗಳಲ್ಲಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬಂದಿದ್ದರು. ಖುದ್ದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ ಕಚೇರಿಯ ಹೊಸ ಸಮಯದ ಒಳಗೆ ಕಚೇರಿಯಲ್ಲಿದ್ದು ತಮ್ಮ ಇಲಾಖೆ ಸಿಬ್ಬಂದಿ ಜೊತೆ ಸಭೆ ನಡೆಸಿದರು.

ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ನಗರ ಮತ್ತು ಜಿಲ್ಲೆಯ ವಿವಿಧೆಡೆಯಿಂದ ನಿತ್ಯ ಪ್ರಯಾಣ ಮಾಡುತ್ತಿದ್ದಾರೆ. ಬಹಳಷ್ಟು ಇಲಾಖೆಗಳಲ್ಲಿ ಮುಖ್ಯಸ್ಥರೇ ಕಾಣಲಿಲ್ಲ.

ಈ ಕುರಿತು ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಪ್ರಶ್ನಿಸಿದರೆ ‘ಸಾಹೇಬ್ರು ನಿನ್ನೆ ರಾತ್ರಿ ಸಭೆ ಮುಗಿಸಿಕೊಂಡು ತಡವಾಗಿ ಹೋಗಿದ್ದಾರೆ. ಕೆಲವೇ ಹೊತ್ತಿನಲ್ಲಿ ಬರುತ್ತಾರೆ’ ಎಂದರೆ, ಇನ್ನೂ ಕೆಲವರು ’ಸರ್‌ ಫೀಲ್ಡ್‌ ಭೇಟಿಗೆ ತೆರಳಿದ್ದಾರೆ’ ಎಂದರು. ಇನ್ನು ಹಲವು ಸಿಬ್ಬಂದಿ ’ಸಮಯ ಬದಲಾವಣೆ ಬುಧವಾರವಷ್ಟೇ ಆಗಿದೆ. ಹೊಂದಿಕೊಳ್ಳಲು ಒಂದೆರೆಡು ದಿನ ಸಮಯ ಬೇಕಾಗುತ್ತದೆ’ ಎಂದು ಸಮಜಾಯಿಷಿ ನೀಡಿದರು. ಬಹುತೇಕ ಇಲಾಖೆಗಳಲ್ಲಿ ಡಿ ಗ್ರೂಪ್‌ ಸಿಬ್ಬಂದಿ ಕಚೇರಿಯನ್ನು ಸ್ವಚ್ಛಗೊಳಿಸಿ ವಿದ್ಯುತ್‌ ದೀಪ ಹಾಗೂ ಫ್ಯಾನ್‌ ಹಾಕಿದ್ದರು. ಕಚೇರಿ ಝಗಮಗಿಸುತ್ತಿದ್ದರೂ ಕಚೇರಿ ಸಮಯಕ್ಕೆ ಸಿಬ್ಬಂದಿ ಕೊರತೆ ಕಾಡಿತು.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯ ಬಾಗಿಲು ಹಾಕಿದ್ದ ಚಿತ್ರಣ

ಶಾಲಾ/ ಕಚೇರಿ ಸಮಯದಲ್ಲಿಯೂ ಬದಲಾವಣೆ

ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಎಲ್ಲ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢಶಾಲೆಗಳು ಮತ್ತು ಶಿಕ್ಷಣ ಇಲಾಖೆ ಅಧೀನ ಕಚೇರಿಗಳ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡಿ ಡಿಡಿಪಿಐ ಶ್ರೀಶೈಲ ಬಿರಾದಾರ ಆದೇಶ ಹೊರಡಿಸಿದ್ದಾರೆ. ಏಪ್ರಿಲ್‌ ಹಾಗೂ ಮೇ ನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ತನಕ ಸಮಯ ಬದಲಾವಣೆ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.