
ಕೊಪ್ಪಳ: ’ಕಾರ್ಖಾನೆಗಳು ಕೇಂದ್ರೀಕೃತಗೊಂಡು ಜಿಲ್ಲಾಕೇಂದ್ರದ ಗ್ರಾಮಗಳಲ್ಲಿ ವ್ಯಾಪಕ ಪರಿಸರ ಮಾಲಿನ್ಯವಾಗಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತ್ವರಿತವಾಗಿ ಸ್ಪಂದಿಸಬೇಕು. ಇಲ್ಲವಾದರೆ ಜನರೇ ಮುಂಬರುವ ಚುನಾವಣೆ ಬಹಿಷ್ಕರಿಸಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಜಿಲ್ಲಾ ಕೇಂದ್ರದ ಸಮೀಪದ ಕಾರ್ಖಾನೆಗಳನ್ನು ಹತೋಟಿಗೆ ತರಬೇಕು ಹಾಗೂ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆಯ 100ನೇ ದಿನದ ಶನಿವಾರದ ಹೋರಾಟದಲ್ಲಿ ಮಾತನಾಡಿದ ಅವರು ‘ಚುನಾವಣೆ ಬಂದಾಗ ಕಾರ್ಖಾನೆ ನಿಲ್ಲುವ ತನಕ ಮತ ಹಾಕುವುದಿಲ್ಲವೆಂದು ನಿರ್ಧಾರ ಮಾಡಿ. ಸಂಘಟಿತರಾದರೆ ಮಾತ್ರ ಹೋರಾಟದ ಯಶಸ್ಸು ಸಾಧ್ಯ’ ಎಂದರು.
‘ಬಾಧಿತ ಹಳ್ಳಿಗಳಿಗೆ ಭೇಟಿ ನೀಡಿದಾಗ ನರಕಸದೃಶ್ಯ ಪರಿಚಯವಾಯಿತು. ಮಹಾತ್ಮ ಗಾಂಧಿ ಅವರ ಸರ್ವೋದಯ ಪರಿಕಲ್ಪನೆಯಲ್ಲಿ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಸುಧಾರಣೆ ಆದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಎನ್ನಬಹುದು. ದೂಳು ಯಾವ ಸರ್ಕಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ತಿಳಿಯದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿ ಸೂರ್ಯಕಾಂತ ಗುಣಕಿಮಠ ಮಾತನಾಡಿ ‘ಕೊಪ್ಪಳ ಸುತ್ತಮುತ್ತಲಿನ ವಾಯುಮಾಲಿನ್ಯದ ಸೂಚ್ಯಂಕ ಅಪಾಯಕಾರಿ ಮಟ್ಟದಲ್ಲಿದೆ. ಮೊದಲು ಕೋವಿಡ್ ಇದ್ದಾಗ ಮಾಸ್ಕ್ ಹಾಕಬೇಕಿತ್ತು. ಈಗ ನಿತ್ಯ ಹಾಕಬೇಕಾಗಿದೆ’ ಎಂದರು.
ಸಾಹಿತಿ ರಂಜಾನ್ ದರ್ಗಾ ಮಾತನಾಡಿ ‘ಕೊಪ್ಪಳ ಸಮೀಪದಲ್ಲಿ 202 ಕಾರ್ಖಾನೆಗಳು ಇದ್ದು, ಎರಡೂವರೆ ದಶಕಗಳಿಂದ ಜನ ದೂಳಿನ ಮಜ್ಜನದಲ್ಲಿದ್ದಾರೆ. ಕಾಲು ಶತಮಾನದಿಂದ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಯಾಕೆ ಇಷ್ಟೊಂದು ನಿರ್ಲಕ್ಷ್ಯ ಮಾಡಿದ್ದಾರೆ. ಫೆ. 24ರಂದು ನಡೆಯುವ ಕೊಪ್ಪಳ ಬಂದ್‌ಗೆ ಬಸವ ಚಿಂತನೆಯ ಎಲ್ಲ ಸ್ವಾಮೀಜಿಗಳು ಬರಬೇಕು. ಬ್ರಿಟಿಷ್ ಸರ್ಕಾರದಲ್ಲೂ ಇಂಥ ದುಸ್ಥಿತಿ ಇರಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು, ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಸಾಹಿತಿ ಎಚ್. ಎಸ್. ಪಾಟೀಲ್, ಎ.ಎಂ. ಮದರಿ, ಪುಸ್ತಕ ಪ್ರಕಾಶಕ ಡಿ.ಎಂ.ಬಡಿಗೇರ, ನಿವೃತ್ತ ಪ್ರಾಚಾರ್ಯರಾದ ಬಿ.ಜಿ. ಕರಿಗಾರ, ಡಿ.ಎಸ್. ಕೌಜಲಗಿ, ಮುಖಂಡರಾದ ದಾನಪ್ಪ ಕವಲೂರು, ಎಸ್.ಬಿ.ರಾಜೂರು, ಜಿ.ಬಿ. ಪಾಟೀಲ್, ಕಾವ್ಯಾ ಪ್ರಸನ್ನ ಗಡಾದ್, ಶಂಭುಲಿಂಗಪ್ಪ ಹಲಗೇರಿ, ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ, ಪ್ರಭು ಹೆಬ್ಬಾಳ, ಮಂಜುನಾಥ ಗೊಂಡಬಾಳ, ಡಿ.ಎಚ್. ಪೂಜಾರ, ಶಿವಕುಮಾರ ಕುಕನೂರು, ಮಂಜುನಾಥ, ಡಾ. ಮಂಜುನಾಥ ಸಜ್ಜನ, ರಮೇಶ ತುಪ್ಪದ, ಶರಣುಗಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Highlights - ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಫೆ. 24ರ ಹೋರಾಟದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಲು ಕರೆ ಆರ್.ಸಿ.ಎಫ್. ಕಲಾ ತಂಡದಿಂದ ಎಚ್ಚರಿಕೆಯ ಕ್ರಾಂತಿಗೀತೆ
Quote - ಮಾಲಿನ್ಯ ಪೀಡಿತ ಗ್ರಾಮಗಳ ಜನರ ಕಣ್ಣುಗಳಲ್ಲಿ ಭಯವಿದೆ. ಇಲ್ಲಿ ಎಲ್ಲರೂ ಬದುಕಬೇಕಾಗಿದೆ. ಈಗಾಗಲೇ ಸಾಕಷ್ಟು ಮಾಲಿನ್ಯವಾಗಿದ್ದು ಮುಂದೆಯೂ ಇದೇ ರೀತಿಯಾದರೆ ಬದುಕು ದುಸ್ತರವಾಗುತ್ತದೆ. ಅಸ್ಲಾಂ ದರ್ಗಾ ಸಾಹಿತಿ
Quote - ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಫೆ. 24ರಂದು ಕೊಪ್ಪಳ ಹಾಗೂ ಭಾಗ್ಯನಗರ ಬಂದ್ ಮಾಡಲಾಗುವುದು. ಜನ ಸ್ವಯಂಪ್ರೇರಣೆಯಿಂದ ಹೋರಾಟದಲ್ಲಿ ಭಾಗಿಯಾಗಬೇಕು. ಅಲ್ಲಮಪ್ರಭು ಬೆಟ್ಟದೂರು ವೇದಿಕೆ ಪ್ರಧಾನ ಸಂಚಾಲಕ
Quote - ಜನ ಸಂಘಟಿತವಾಗಿ ಹೋರಾಟ ಮಾಡಿದರೆ ಮಾತ್ರ ಬೇಡಿಕೆಗಳು ಈಡೇರುತ್ತವೆ. ಮಾಲಿನ್ಯದ ವಿರುದ್ಧದ ಹೋರಾಟಕ್ಕೆ ವಕೀಲರ ಸಂಘದ ಸಂಪೂರ್ಣ ಬೆಂಬಲವಿದೆ. ಎ.ವಿ. ಕಣವಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ
Quote - ಮಾಲಿನ್ಯದ ಅಪಾಯದಿಂದ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಎಲ್ಲರೂ ಸೇರಿದರೆ ಹೋರಾಟಕ್ಕೆ ಗೆಲುವು ಸಿಗುತ್ತದೆ. ಜ್ಯೋತಿ ಎಂ. ಗೊಂಡಬಾಳ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ
Quote - ಜನಪ್ರತಿನಿಧಿಗಳು ನಮ್ಮ ಪರ ಧ್ವನಿ ಎತ್ತದಿದ್ದರೆ ರಾಜೀನಾಮೆ ಕೊಡಲಿ. ಚುನಾವಣೆಗೆ ಸ್ಪರ್ಧೆ ಮಾಡುವುದು ಬೇಕಿಲ್ಲ. ಜಿಲ್ಲಾಧಿಕಾರಿ ಆರೋಗ್ಯ ಸರ್ವೆ ಮಾಡಿಸುವ ಬದಲು ಕಾರ್ಖಾನೆಗಳ ಪ್ರದೇಶದಲ್ಲಿ ಓಡಾಡಲಿ. ಗವಿಸಿದ್ದಪ್ಪ ಹಿರೇಬಗನಾಳ ಗ್ರಾಮದ ರೈತ
Cut-off box - 100ನೇ ದಿನದ ಹೋರಾಟದ ನಿರ್ಣಯಗಳು * ಫೆ. 24ರಂದು ಕೊಪ್ಪಳ ಭಾಗ್ಯನಗರ ಸ್ವಯಂ ಪ್ರೇರಿತ ಬಂದ್ ಮಾಡಲು ನಿರ್ಧಾರ. ಅಂದು ಗವಿಮಠದಿಂದ ತಾಲ್ಲೂಕು ಕ್ರೀಡಾಂಗಣದ ತನಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. * ಕೊಪ್ಪಳದ ವಿವಿಧ ಬಡಾವಣೆಗಳಲ್ಲಿ ಮರಗಳನ್ನು ನೆಟ್ಟು ಬಲ್ಡೋಟಾ ಹೆಸರಿನ ನಾಮಫಲಕ ಹಾಕಿರುವ ಫಲಕ ಸಿಮೆಂಟ್‌ನ ಆಸನಗಳನ್ನು ಮರಳಿ ಕಂಪನಿಗೆ ವಾಪಸ್ ಕೊಡಬೇಕು. * ಕೇಂದ್ರೀಕೃತ ಕಾರ್ಖಾನೆಗಳ ಸಮೀಪದ 20 ಗ್ರಾಮಗಳ ಜನರ ಆರೋಗ್ಯ ಸಮೀಕ್ಷೆ ಪರಿಸರ ಮತ್ತು ಆರೋಗ್ಯ ಪುನರ್ ನಿರ್ಮಾಣಕ್ಕೆ ಒತ್ತಾಯ ತಜ್ಞರ ವರದಿಯಂತೆ ಕಾರ್ಖಾನೆಗಳ ಸ್ಥಳಾಂತರ ಆರಂಭಿಸಬೇಕು. * ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಮುಚ್ಚಿಸಬೇಕು ಅಲ್ಲಿಯವರೆಗೆ ಶುದ್ದ ಸಂಸ್ಕರಿಸಿದ ನೀರನ್ನು ಜನ ಜಾನುವಾರುಗಳಿಗೆ ಸರಬುರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕು. * ಬಸಾಪುರ ಸಾರ್ವಜನಿಕ ಕೆರೆಯನ್ನು ಕೂಡಲೇ ಮರಳಿ ಜನರಿಗೆ ಬಿಟ್ಟು ಕೊಡಬೇಕು. * ಭದ್ರಶ್ರೀ ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ ಹೋರಾಟ ತೀವ್ರಗೊಳಿಸಲು ನಿರ್ಧಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.