
ಕಲಬುರಗಿ: ನಿವೃತ್ತ ಕಾರ್ಮಿಕರಿಗೆ ಕನಿಷ್ಠ ₹ 7,500 ಪಿಂಚಣಿ, ತುಟ್ಟಿ ಭತ್ಯೆ, ವೈದ್ಯಕೀಯ ಭತ್ಯೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಕಲಬುರಗಿ–ಬೀದರ್ ಜಿಲ್ಲಾ ಇಪಿಎಸ್–95 ಪೆನ್ಶನರ್ ವೇದಿಕೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಕಲಬುರಗಿ ಹಾಗೂ ಬೀದರ್ ಜಿಲ್ಲೆಯಿಂದ ನೂರಾರು ನಿವೃತ್ತ ನೌಕರರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ‘ದೇಶವನ್ನು ಕಟ್ಟಿ ಅಭಿವೃದ್ಧಿ ಪಡಿಸಿದ ಅನೇಕ ಸಂಸ್ಥೆಗಳಲ್ಲಿ ಹತ್ತಾರು ವರ್ಷದಿಂದ ಸೇವೆ ಸಲ್ಲಿಸಿದ ನೌಕರರು ಇಂದು ಪಿಂಚಣಿಗಾಗಿ ಪರದಾಡುವ ಪರಿಸ್ಥಿತಿ ಬಂದಿರುವುದು ವಿಷಾದನೀಯ’ ಎಂದರು.
‘ನೌಕರರು ಸೇವೆಯಲ್ಲಿ ಇದ್ದಾಗ ಮಾಸಿಕ ತಮ್ಮ ವೇತನದಲ್ಲಿ ಶೇ 12ರಷ್ಟು ವೇತನವನ್ನು ಇಪಿಎಸ್ ಸಂಸ್ಥೆಗೆ ನೀಡಿದ್ದಾರೆ. ಆದರೆ ನಿವೃತ್ತಿ ಹೊಂದಿದ ನಂತರ ಮಾಸಿಕ ಕೇವಲ ಒಂದು ಸಾವಿರದಿಂದ ಒಂದೂವರೆ ಸಾವಿರವರೆಗೆ ಮಾತ್ರ ಪಿಂಚಣಿ ಪಡೆಯುವುದು’ ಖಂಡನೀಯ ಎಂದರು.
‘ದೇಶಾದ್ಯಂತ 70 ಲಕ್ಷ ಜನರು ವಿವಿಧೆಡೆ ಹೋರಾಟ ನಡೆಸುತ್ತಿದ್ದು, ಸರ್ಕಾರ ನಮ್ಮ ಪ್ರಮುಖ ಬೇಡಿಕೆಯಾದ ಕನಿಷ್ಠ ಮಾಸಿಕ ₹ 7,500 ಪಿಂಚಣಿ, ತುಟ್ಟಿ ಭತ್ಯೆ ಹಾಗೂ ವೈದ್ಯಕೀಯ ವೆಚ್ಚದ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಕಲಬುರಗಿ ಬೀದರ್ ಇಪಿಎಸ್ ನೌಕರರ ಸಂಘದ ಅಧ್ಯಕ್ಷ ಚಕ್ರಪಾಣಿ ಸೂರ್ಯ ಮಾತನಾಡಿ, ‘ನಾವು ಸೇವೆಯಲ್ಲಿದ್ದಾಗ ನೀಡಿದ್ದ ಹಣ ಇಂದು ಕನಿಷ್ಠ ನಮ್ಮ ಬದುಕು ಕಟ್ಟಿಕೊಳ್ಳಲು ಬೇಕಾಗುವಷ್ಟು ಹಣ ನೀಡಬೇಕು’ ಎಂದು ಒತ್ತಾಯಿಸಿದರು.
ಕರ್ನಾಟಕ ಯುನೈಟೆಡ್ ಸಕ್ಕರೆ ಕಾರ್ಮಿಕರ ಫೆಡರೇಷನ್ ಅಧ್ಯಕ್ಷ ಬಸವಣ್ಣಗೌಡ, ವೇದಿಕೆ ಉಪಾದ್ಯಕ್ಷ ಸಿದ್ದರಾಮ ಶಿರವಾಳ, ಅರ್ಜುನ ತಮಗಿಕರ್, ನಾಗರಾಜ ಪಾಟೀಲ, ಚಂದ್ರಕಾಂತ ಮಾನ್ಯಾಳ, ಸಿದ್ಧಾರಾಮ ನಡಗೇರಿ, ಮುಖಂಡ ಶರಣಬಸಪ್ಪ ಕಲಶೆಟ್ಟಿ, ಬಸವರಾಜ ಆಳಂದ, ಶಾಂತಪ್ಪ ಹಳ್ಳಿಕೇಡ, ಶಿವಶರಣಪ್ಪ ಕಂಬಾರ, ರಾಜು ವರದಮಾನೆ, ಷಣ್ಮುಖಪ್ಪ ಹಡಪದ, ಮಹಾಲಿಂಗಪ್ಪ ಜಮಾದಾರ, ದೇವಿಂದ್ರ ಮೇಲಿನಕೇರಿ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.