ತ್ಯಾಜ್ಯವಾದ ರೈತನ ಶ್ರಮ.. ಸೂಕ್ತ ಬೆಲೆ ಸಿಗದಿರುವುದರಿಂದ ರೈತರು ತ್ಯಾಜ್ಯವೆಂಬಂತೆ ಸುರಿದು ಹೋಗಿರುವ ಚೆಂಡು ಹೂಗಳನ್ನು ಆರಿಸಿಕೊಳ್ಳುತ್ತಿರುವ ಮಹಿಳೆಯರು ಮತ್ತು ಮಕ್ಕಳು ಮಂಗಳವಾರ ಕೊಪ್ಪಳದ ತಾಲ್ಲೂಕು ಕ್ರೀಡಾಂಗಣದಲ್ಲಿ ಕಂಡು ಬಂದಿತು. –
ಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ಕೊಪ್ಪಳ: ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಸಡಗರದಿಂದ ಎಲ್ಲೆಡೆಯೂ ಆಚರಿಸಲಾಗುತ್ತಿದೆ. ಜನರಲ್ಲಿ ಹಬ್ಬದ ಖುಷಿಯೂ ಮನೆ ಮಾಡಿದೆ. ಆದರೆ ವಾಹನಗಳಿಗೆ ಆಲಂಕಾರಿಕ ಸಾಮಗ್ರಿಗಳನ್ನು ಮಾರಾಟ ಮಾಡಲು ಬೇರೆ ರಾಜ್ಯಗಳಿಂದ ಬಂದಿರುವ ‘ಅಲೆಮಾರಿ ವ್ಯಾಪಾರಿ’ಗಳಿಗೆ ಈಗ ಹಬ್ಬದ ಸಂಭ್ರಮವಿಲ್ಲದಿದ್ದರೂ ಅವರಲ್ಲಿ ಬಹಳಷ್ಟು ಖುಷಿಯಿದೆ!
ಜಿಲ್ಲಾ ಕೇಂದ್ರದಲ್ಲಿ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗ, ತಾಲ್ಲೂಕು ಕ್ರೀಡಾಂಗಣ, ಜವಾಹರ ರಸ್ತೆಯ ಮಾರುಕಟ್ಟೆ ಹೀಗೆ ಅನೇಕ ಕಡೆ ಎಲ್ಲಿ ನೋಡಿದರೂ ದೀಪಾವಳಿ ಆಚರಣೆಗೆ ಬೇಕಾಗುವ ತರಹೇವಾರಿ ಹಣ್ಣುಗಳು, ಬಣ್ಣಬಣ್ಣಗಳ ಹೂವುಗಳು, ಬಾಳೆದಿಂಡು, ಕಬ್ಬು ಸೇರಿದಂತೆ ಅನೇಕ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಜನ ಕೂಡ ಅಷ್ಟೇ ಉತ್ಸಾಹದಿಂದ ಖರೀದಿ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಜಿಲ್ಲಾ ಕೇಂದ್ರದಲ್ಲಿ ಸಂಭ್ರಮ ಕಂಡುಬರುತ್ತಿದೆ. ಸಿಹಿ ತಿನಿಸುಗಳ ಮಾರಾಟಗಳ ಅಂಗಡಿಗಳಲ್ಲಿಯೂ ಜನಜಂಗುಳಿ ಇದೆ.
ದೀಪಾವಳಿ ಹಬ್ಬದಲ್ಲಿ ನರಕ ಚತುರ್ದಶಿ, ಲಕ್ಷ್ಮೀ ಪೂಜೆ ಮತ್ತು ಬಲಿಪಾಡ್ಯಮಿ ಪ್ರಮುಖವಾದದ್ದು. ಗ್ರಾಮೀಣ ಪ್ರದೇಶದಲ್ಲಿ ಈಗಲೂ ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಮನೆಬಳಕೆಯ ವಾಹನಗಳಿಗೆ ವಿವಿಧ ಬಣ್ಣಗಳ ಹಾಗೂ ವಿನ್ಯಾಸಗಳ ಬಟ್ಟೆಯ ಮತ್ತು ಪ್ಲಾಸ್ಟಿಕ್‌ನ ಗೊಂಡೆಗಳನ್ನು ಕಟ್ಟಲಾಗುತ್ತಿದೆ. ಜಾನುವಾರುಗಳಿಗೆ ಕಟ್ಟಿ ಅವುಗಳನ್ನು ಬಣ್ಣಗಳಿಂದ ಅಲಂಕಾರ ಮಾಡಿ ಮನುಷ್ಯರಿಗಷ್ಟೇ ಅಲ್ಲ; ಜಾನುವಾರುಗಳಲ್ಲಿಯೂ ಹಬ್ಬದ ಸಂಭ್ರಮ ಕಾಣುವಂತೆ ಜನ ಮಾಡುತ್ತಾರೆ. ರಿಬ್ಬನ್, ಗೊಂಡೆ ಮಾರಾಟ ಮಾಡಲು ಇಲ್ಲಿನ ಡಿಎಆರ್ ಮೈದಾನದ ಮುಂಭಾಗದಲ್ಲಿ ರಾಜಸ್ಥಾನದ ವ್ಯಾಪಾರಿಗಳು ಬಂದಿದ್ದಾರೆ.
ಹಲವು ದಶಕಗಳಿಂದ ನಿರಂತರವಾಗಿ ರಾಜ್ಯಕ್ಕೆ ಬಂದು ವ್ಯಾಪಾರ ಮಾಡುತ್ತಿರುವ ‘ಅಲೆಮಾರಿ’ಗಳು ಹೊಸಪೇಟೆ, ಕೊಪ್ಪಳ ತಾಲ್ಲೂಕಿನ ಹೊಸಲಿಂಗಾಪುರ, ಹುಬ್ಬಳ್ಳಿ ಹೀಗೆ ರಾಜ್ಯದ ಅಲ್ಲಲ್ಲಿ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಕಾಯಂ ಅಂಗಡಿಗಳನ್ನು ಹೊಂದಿದ್ದಾರೆ. ಋತುವಿಗೆ ಹಾಗೂ ಮಾರುಕಟ್ಟೆಗೆ ಅನುಗುಣವಾಗಿ ಅಲ್ಲಲ್ಲಿ ಹೋಗಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಾರೆ. ದಸರಾ ಹಾಗೂ ದೀಪಾವಳಿ ಅವರಿಗೆ ದೊಡ್ಡ ಲಾಭ ತಂದುಕೊಡುವ ಹಬ್ಬಗಳಾಗಿವೆ. ಹಬ್ಬ ಮುಗಿದ ಬಳಿಕ ಅವರಿಗೆ ದೀಪಾವಳಿ ಆರಂಭವಾಗುತ್ತದೆ.
ಹಬ್ಬಗಳ ಋತು ಮುಗಿದ ಬಳಿಕ ‘ಅಲೆಮಾರಿ ವ್ಯಾಪಾರಿ’ಗಳು ಮೈಲಾರ, ಸವದತ್ತಿ, ಕೊಟ್ಟೂರು, ಗವಿಸಿದ್ಧೇಶ್ವರ ಮಠದ ಜಾತ್ರೆ ಹೀಗೆ ಸಾಂದರ್ಭಿಕ ವೇಳಾಪಟ್ಟಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರೆ. ಯಾವ ಸಮಯದಲ್ಲಿ ಎಲ್ಲಿಗೆ ತೆರಳಿದರೆ ಹೆಚ್ಚು ಲಾಭ ಗಳಿಸಬಹುದು ಎನ್ನುವ ಲೆಕ್ಕಾಚಾರದೊಂದಿಗೆ ಅಲ್ಲಿಗೆ ಹೋಗುತ್ತಾರೆ.
ಒಂದು ಕುಟುಂಬದಲ್ಲಿ ಏಳೆಂಟು ಜನ ಸದಸ್ಯರನ್ನು ಹೊಂದಿರುವ ಇಲ್ಲಿಗೆ ಬಂದ ರಾಜಸ್ಥಾನದ ವ್ಯಾಪಾರಿ ಮುಕೇಶ್ ಎರಡು ದಶಕಗಳಿಂದ ರಾಜ್ಯದಲ್ಲಿಯೇ ನೆಲೆಸಿದ್ದರಿಂದ ಅಷ್ಟಿಷ್ಟು ಕನ್ನಡ ಕಲಿತುಕೊಂಡಿದ್ದಾರೆ. ಗ್ರಾಹಕರ ಜೊತೆ ಕನ್ನಡದಲ್ಲಿಯೇ ಮಾತನಾಡಿ ವ್ಯಾಪಾರವನ್ನೂ ಹೆಚ್ಚಿಸಿಕೊಳ್ಳುವುದು, ಗ್ರಾಹಕರು ಚೌಕಾಶಿ ಮಾಡಿದರೆ ಅದಕ್ಕುತ್ತರ ಕೊಡುವ ಕೌಶಲ ರೂಢಿಸಿಕೊಂಡಿದ್ದಾರೆ.
‘ದಶಕದ ಹಿಂದೆ ವ್ಯಾಪಾರ ಆರಂಭಿಸಿದಾಗ ಸ್ಪರ್ಧೆ ಕಡಿಮೆಯಿತ್ತು. ಈಗ ಸಾಕಷ್ಟು ಕಡೆ ಆಲಂಕಾರಿಕ ಸಾಮಗ್ರಿಗಳನ್ನು ಮಾರಾಟ ಮಾಡುವುದರಿಂದ ಎಲ್ಲರಿಗೂ ವಹಿವಾಟು ಕಡಿಮೆಯಾಗಿದೆ. ಆದರೂ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದ ವ್ಯಾಪಾರ ಬಿಡಲು ಆಗುವುದಿಲ್ಲ. ಎಲ್ಲಿಯೇ ಹೋದರೂ ಕುಟುಂಬ ಸಮೇತ ತೆರಳಿ ವ್ಯಾಪಾರ ಮಾಡುತ್ತೇನೆ’ ಎಂದು ಮುಕೇಶ್ ಹೇಳಿದರು.
ದೀಪಾವಳಿ ಸಮಯದಲ್ಲಿ ಆದಾಯ ಪಡೆದುಕೊಂಡು ಬದುಕು ಬೆಳಕಾಗಿಸಿಕೊಳ್ಳುತ್ತೇವೆ. ಬಲಿಪಾಡ್ಯಮಿ ಮುಗಿದ ಮರುದಿನ ಹಬ್ಬ ಆಚರಿಸುತ್ತೇವೆಮುಕೇಶ್, ವ್ಯಾಪಾರಿ
ಮಾರುಕಟ್ಟೆಯಲ್ಲಿ ಜನಜಂಗುಳಿ
ಖರೀದಿಯ ಕಲರವ ಕೊಪ್ಪಳ: ದೀಪಾವಳಿ ಹಬ್ಬದ ಎರಡು ದಿನಗಳ ಮೊದಲು ಜಿಲ್ಲಾ ಕೇಂದ್ರದ ಮಾರುಕಟ್ಟೆಯಲ್ಲಿ ಮನೆಮಾಡಿದ್ದ ಜನಜಂಗುಳಿಯೇ ಮಂಗಳವಾರವೂ ಕಂಡುಬಂದಿತು. ಗ್ರಾಹಕರನ್ನು ಆಕರ್ಷಿಸಲು ಕೇಂದ್ರೀಯ ಬಸ್ ನಿಲ್ದಾಣದ ಬಳಿ ಇರುವ ಹಣ್ಣುಗಳ ಮಾರಾಟದ ಅಂಗಡಿಗಳು ದೊಡ್ಡ ಮಾಲೆಯ ಆಕಾರದಲ್ಲಿ ಹಣ್ಣುಗಳನ್ನು ಜೋಡಿಸಿ ಗ್ರಾಹಕರನ್ನು ಸೆಳೆಯುವಂತೆ ಮಾಡಿವೆ. ತಾಲ್ಲೂಕು ಕ್ರೀಡಾಂಗಣದಲ್ಲಿ ಹೂವು ಬಾಳೆ ದಿಂಡು ಬಾಳೆ ಎಲೆ ಪಟಾಕಿ ಹೀಗೆ ಎಲ್ಲ ವಸ್ತುಗಳು ಒಂದೇ ಕಡೆ ಸಿಗುತ್ತಿರುವುದು ಜನರಿಗೆ ಅನುಕೂಲವಾಗಿದೆ.
ಮಳೆ: ತಾಲ್ಲೂಕು ಕ್ರೀಡಾಂಗಣವೇ ಆಶ್ರಯ
ತಾಣ ಅನೇಕ ವ್ಯಾಪಾರಿಗಳು ಮೊಕ್ಕಾಂ ಹೂಡಿರುವ ಕೊಪ್ಪಳ ತಾಲ್ಲೂಕು ಕ್ರೀಡಾಂಗಣದಲ್ಲಿ ಮಳೆ ಗಾಳಿ ಹಾಗೂ ಬಿಸಿಲಿನಿಂದ ಆಸರೆ ಪಡೆಯಲು ಅನುಕೂಲವಾಗಿದೆ. ರಾಶಿ ರಾಶಿ ಚೆಂಡು ಹೂವುಗಳು ಹಾಗೂ ಗಿಡಗಳನ್ನು ತಂದಿರುವ ವ್ಯಾಪಾರಿಗಳು ಅವುಗಳನ್ನು ಒಂದೆಡೆ ಒಟ್ಟಿದ್ದಾರೆ. ರಾತ್ರಿ ಹೊತ್ತು ಅವುಗಳನ್ನು ಕಾದು ಬೆಳಿಗ್ಗೆ ವ್ಯಾಪಾರ ಮಾಡುತ್ತಿದ್ದಾರೆ. ಮಂಗಳವಾರ ಜಿಲ್ಲಾ ಕೇಂದ್ರದಲ್ಲಿ ಮಳೆ ಸುರಿಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ವ್ಯಾಪಾರಿಗಳು ಪರದಾಡಬೇಕಾಯಿತು. ವ್ಯಾಪಾರಿಗಳು ಜಿಲ್ಲೆ ಮಾತ್ರವಲ್ಲದೆ ನೆರೆಯ ಲಕ್ಕುಂಡಿ ಹೊಸಪೇಟೆಯಿಂದಲೂ ಹೂವಿನ ವ್ಯಾಪಾರಿಗಳು ಇಲ್ಲಿಗೆ ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.