ADVERTISEMENT

ಹಕ್ಕು ಪ್ರತಿಪಾದನೆ ಜೊತೆ ಕರ್ತವ್ಯವೂ ಮುಖ್ಯ: ಸುರೇಶ ಇಟ್ನಾಳ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:49 IST
Last Updated 11 ಡಿಸೆಂಬರ್ 2025, 6:49 IST
ಕೊಪ್ಪಳದಲ್ಲಿ ಬುಧವಾರ ನಡೆದ ವಿಶ್ವ ಮಾನವ ಹಕ್ಕುಗಳ ದಿನದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಅತಿಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು
ಕೊಪ್ಪಳದಲ್ಲಿ ಬುಧವಾರ ನಡೆದ ವಿಶ್ವ ಮಾನವ ಹಕ್ಕುಗಳ ದಿನದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಅತಿಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು   

ಕೊಪ್ಪ‍ಳ: ‘ಮಾನವ ಹಕ್ಕುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲರೂ ತಮ್ಮ ಹಕ್ಕುಗಳ ಪ್ರತಿಪಾದನೆ ಜೊತೆ ಕರ್ತವ್ಯ ಪಾಲನೆಯೂ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು.  

ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಭಾರತದಲ್ಲಿ ಸಂವಿಧಾನಾತ್ಮಕ, ಶಾಸನಬದ್ಧ ಹಾಗೂ ಖಾಸಗಿ ಎನ್ನುವ ಮೂರು ಬಗೆಯ ಹಕ್ಕುಗಳಿವೆ. ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣೆ ವಿರುದ್ಧದ ಹಕ್ಕು, ಆರೋಗ್ಯಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು, ಕಲಿಕೆಯ ಹಕ್ಕು, ಭಾರತದ ಯಾವುದೇ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿ ವಾಸಿಸುವ ಹಕ್ಕು ಕೂಡ ಇದೆ’ ಎಂದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಮಾತನಾಡಿ ‘ವಿಶ್ವ ಮಾನವ ಹಕ್ಕುಗಳ ದಿನವನ್ನು ಒಬ್ಬ ಮನುಷ್ಯನನ್ನು ಮನುಷ್ಯನಾಗಿ ನೋಡಿಕೊಳ್ಳಲು ಅವಕಾಶ ಬೇಕು ಎನ್ನುವ ಕಾರಣಕ್ಕೆ ಹಮ್ಮಿಕೊಳ್ಳಲಾಗುತ್ತದೆ. ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್.ಅರಸಿದ್ದಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳದ ವ್ಯವಸ್ಥಾಪಕ ಹರೀಶ್ ಜೋಗಿ, ಕೊಪ್ಪಳ ತಹಶೀಲ್ಠಾರ್‌ ವಿಠ್ಠಲ ಚೌಗುಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು

‘ಶುದ್ಧ ಗಾಳಿ ನೀರು ಕೂಡ ಹಕ್ಕು’

ಕುಕನೂರು ತಾಲ್ಲೂಕಿನ ಮಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರಭುರಾಜ್ ನಾಯಕ ಅವರು ವಿಶ್ವ ಮಾನವ ಹಕ್ಕುಗಳ ದಿನದ ಕುರಿತು ಉಪನ್ಯಾಸ ನೀಡಿ ’ಪ್ರಸ್ತುತ ಹಣ ಕೊಟ್ಟು ಬೆನ್ನ ಹಿಂದೆ ಗಾಳಿ ಹೊತ್ತುಕೊಂಡು ದುಡ್ಡು ಕೊಟ್ಟು ಬಾಟಲಿ ನೀರು ಕುಡಿಯುವ ದುರ್ಗತಿ ಬಂದಿದೆ. ಜಗತ್ತಿನಲ್ಲಿ ಮಾನವನಿಗೆ ಮಾನವ ಹಕ್ಕಾಗಿರುವ ಗಾಳಿ ನೀರು ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.  ‘ಮಾನವ ಹಕ್ಕುಗಳು ಸರಳವಾಗಿದೆ. ಆದರೆ ಸರಳವಾಗಿರುವುದನ್ನು ಅಷ್ಟು ಸರಳವಾಗಿ ಸಾಮಾನ್ಯರಿಗೆ ಸಿಗಲು ಬಿಡುತ್ತಿಲ್ಲ. ಶುದ್ಧ ಗಾಳಿ ನೂರು ಔಷಧಗಳಿಗೆ ಸಮ ಎನ್ನುವ ವಾಡಿಕೆ ಇದೆ. ಆದರೆ ಆಹಾರದಲ್ಲಿ ಮಾಲಿನ್ಯತೆ ತುಂಬಿದೆ. ಕಲಬೆರಿಕೆ ಆಹಾರ ಸೇವನೆಯಿಂದ ಮಾನವನ ಜೀವಿತಾವಧಿ ಕಡಿಮೆಯಾಗುತ್ತಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.