
ಮೂರು ದಿನಗಳ ತರಬೇತಿ ಕಾರ್ಯಾಗಾರ | ಜನರನ್ನು ಕಾನೂನು ಸಾಕ್ಷರರನ್ನಾಗಿ ಮಾಡಿ | ಪ್ರಾಧಿಕಾರ ಹಾಗೂ ಕಕ್ಷಿದಾರರ ಮಧ್ಯೆ ಕೊಂಡಿ
ಕೊಪ್ಪಳ: ‘ಜಿಲ್ಲೆಯಲ್ಲಿ ಕಾನೂನು ಸ್ವಯಂ ಸೇವಕರ ತಂಡವನ್ನು ರಚಿಸಲಾಗಿದ್ದು, ಸೇವಕರು ಜನರಲ್ಲಿ ಕಾನೂನಿನ ಜ್ಞಾನ ಬಿತ್ತುವ ಮೂಲಕ ಕಾನೂನು ಸಾಕ್ಷರರನ್ನಾಗಿ ಮಾಡಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಸಿ. ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಜಿಲ್ಲೆಯ ಅರೆಕಾಲಿಕ ಕಾನೂನು ಸ್ವಯಂಸೇವಕರಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಕಾನೂನು ಸ್ವಯಂಸೇವಕರ ಪಡೆ ನಿರ್ಮಾಣವಾಗಿದೆ. ನ್ಯಾಯಾಧೀಶರು ನೇರವಾಗಿ ಮನೆಮನೆಗೆ ಹೋಗಲು ಆಗುವುದಿಲ್ಲ. ಉಚಿತವಾಗಿ ಪ್ರಕರಣಗಳನ್ನು ನಡೆಸಲು ಕಾನೂನು ಸೇವಾ ಪ್ರಾಧಿಕಾರದಲ್ಲಿ ಅವಕಾಶವಿದೆ’ ಎಂದರು.
‘ಪ್ರಾಧಿಕಾರದ ಸವಲತ್ತುಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಸ್ವಯಂ ಸೇವಕರು ಮಾಡಬೇಕು. ಜನರು ನ್ಯಾಯಾಲಯಕ್ಕೆ ಬಂದು ಸಲಹೆ ಪಡೆಯಬೇಕು. ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿದ್ದು, ಲೋಕ ಅದಾಲತ್ ಮೂಲಕ ರಾಜಿ ಮಾಡಿ ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಮಾತನಾಡಿ, ‘ಅರೆಕಾಲಿಕ ಸ್ವಯಂ ಸೇವಕರನ್ನು ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ನೇಮಕ ಮಾಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಕ್ಷಿದಾರರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಹಿರಿಯ ವಕೀಲರಾದ ವಿ.ಎಂ ಭೂಸನೂರಮಠ ಮಾತನಾಡಿ, ‘ಉಚಿತ ಕಾನೂನು ಸೌಲಭ್ಯ ಜನರ ಮನೆ ಬಾಗಿಲಿಗೆ ಮುಟ್ಟಿಸಬೇಕು. ಸಹನೆಯಿಂದ ಕಾನೂನು ಅರಿತುಕೊಳ್ಳಬೇಕು, ವಕೀಲ ವೃತ್ತಿ ಕೇವಲ ಹಣ ಮಾಡುವುದಲ್ಲ, ವೃತ್ತಿ ಗೌರವದೊಂದಿಗೆ ಸಮಾಜಕ್ಕೆ ಒಳ್ಳೆಯದು ಮಾಡಬೇಕು. ವಕೀಲರು ಸತ್ಯ ಹಾಳಾಗದಂತೆ ಕೆಲಸ ಮಾಡಬೇಕು’ ಎಂದರು
ನ್ಯಾಯಾಧೀಶರಾದ ಕುಮಾರ ಡಿ.ಕೆ., ಸರಸ್ವತಿ ದೇವಿ, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎ.ವಿ. ಕಣವಿ, ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಪ್ರಮುಖರಾದ ಪ್ರದೀಪ ಉಂಕಿ, ವೆಂಕಟೇಶ ಜೂಮಿ, ಸಿದ್ದಾರ್ಥ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.