ADVERTISEMENT

ಶಾಸಕರೊಂದಿಗೆ ಹಣದ ವ್ಯವಹಾರವಿಲ್ಲ: ಉಲ್ಟಾ ಹೊಡೆದ ನಿವೃತ್ತ ಪೊಲೀಸ್‌ ಕಾನ್‌ಸ್ಟೆಬಲ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 4:51 IST
Last Updated 6 ಸೆಪ್ಟೆಂಬರ್ 2022, 4:51 IST
ನಿವೃತ್ತ ಪೊಲೀಸ್‌ ಕಾನ್‌ಸ್ಟೆಬಲ್‌ ಕುಷ್ಟಗಿ ತಾಲ್ಲೂಕಿನ ಬೇಗೂರು ಗ್ರಾಮದ ಪರಸಪ್ಪ
ನಿವೃತ್ತ ಪೊಲೀಸ್‌ ಕಾನ್‌ಸ್ಟೆಬಲ್‌ ಕುಷ್ಟಗಿ ತಾಲ್ಲೂಕಿನ ಬೇಗೂರು ಗ್ರಾಮದ ಪರಸಪ್ಪ   

ಕೊಪ್ಪಳ: ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸಗೂರು ಜೊತೆಗಿನ ಸಂಭಾಷಣೆಯಲ್ಲಿ ಮಾತನಾಡಿದ್ದ ನಿವೃತ್ತ ಪೊಲೀಸ್‌ ಕಾನ್‌ಸ್ಟೆಬಲ್‌ ಕುಷ್ಟಗಿ ತಾಲ್ಲೂಕಿನ ಬೇಗೂರು ಗ್ರಾಮದ ಪರಸಪ್ಪ ಮಂಗಳವಾರ ‘ಶಾಸಕರೊಂದಿಗೆ ಯಾವುದೇ ಹಣದ ವ್ಯವಹಾರ ಇಲ್ಲ’ ಎಂದಿದ್ದಾರೆ.

ಸೋಮವಾರ ಇವರ ನಡುವಿನ ಮಾತುಕತೆಯ ಆಡಿಯೊ ವೈರಲ್‌ ಆಗಿತ್ತು. ‘ನನ್ನ ಮಗನ ಪಿಎಸ್ಐ‌ ನೇಮಕಾತಿಗೆ ಕೊಟ್ಟ ₹15 ಲಕ್ಷ ಹಣ ವಾಪಸ್ ಕೊಡಿ. ನಿಮ್ಮ ಕೈ ಮುಗಿತೀನಿ ಸರ್‌. ಹಣ ಕೊಟ್ಟು ಒಂದೂವರೆ ವರ್ಷವಾಯಿತು. ಬಹಳ ಕಷ್ಟದಲ್ಲಿದ್ದೇನೆ’ ಎಂದ ಮಾತುಗಳು ಆಡಿಯೊದಲ್ಲಿ ದಾಖಲಾಗಿವೆ.

ಈ ಕುರಿತು ಪರಸಪ್ಪ ಮಾತನಾಡಿರುವ ವಿಡಿಯೊವನ್ನು ಬಿಜೆಪಿ ಮುಖಂಡರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ‘ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದ ಆಡಿಯೊ ಬಿಡುಗಡೆಯಾಗಿತ್ತು. ಕಾರಟಗಿ ಪುರಸಭೆ ಸದಸ್ಯ ಆನಂದ ಎಂ. ಅವರೊಂದಿಗೆ ನಮ್ಮದು ಹಣದ ವ್ಯವಹಾರವಿತ್ತು. ತಂಟೆ ತಕರಾರು ಕೂಡ ಇತ್ತು. ಈ ಸಮಸ್ಯೆ ಪರಿಹರಿಸಿಕೊಡಿ ಎಂದು ಶಾಸಕ ದಢೇಸಗೂರು ಬಳಿ ಹೋಗಿದ್ದೆವು. ಪರಿಹರಿಸಿಕೊಡುವುದಾಗಿ ಭರವಸೆ ನೀಡಿ ಸಾಕಷ್ಟು ವಿಳಂಬ ಮಾಡಿದ್ದರು. ದಢೇಸಗೂರು ಸಾಹೇಬ್ರು ಮತ್ತು ನನ್ನ ನಡುವೆ ಯಾವುದೇ ದುಡ್ಡಿನ ವ್ಯವಹಾರವಾಗಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಸೋಮವಾರ ರಾತ್ರಿ ಆನಂದಪ್ಪ ಅವರ ಜೊತೆ ಸೇರಿ ನಮ್ಮ ಹಣಕಾಸಿನ ವ್ಯವಹಾರ ಪರಿಹರಿಸಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿ: ಈ ಕುರಿತು ಮಾತನಾಡಲು ಪರಸಪ್ಪ ಮಂಗಳವಾರ 10.30ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.