ADVERTISEMENT

ಸಂಭ್ರಮದ ಮಾರ್ಕಂಡಯ್ಯ ರಥೋತ್ಸವ

ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:47 IST
Last Updated 23 ಫೆಬ್ರುವರಿ 2020, 10:47 IST
ಮುನಿರಾಬಾದ್ ಸಮೀಪ ಶಿವಪುರ ಶ್ರೀಮಾರ್ಕಂಡೇಶ್ವರ ವಾರ್ಷಿಕಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರಸಂಜೆ ಮಹಾರಥೋತ್ಸವ ಜರುಗಿತು
ಮುನಿರಾಬಾದ್ ಸಮೀಪ ಶಿವಪುರ ಶ್ರೀಮಾರ್ಕಂಡೇಶ್ವರ ವಾರ್ಷಿಕಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರಸಂಜೆ ಮಹಾರಥೋತ್ಸವ ಜರುಗಿತು   

ಮುನಿರಾಬಾದ್: ಸಮೀಪದ ಶಿವಪುರ ತುಂಗಭದ್ರಾ ನದಿತಟದ ಶ್ರೀಮಾರ್ಕಂಡೇಶ್ವರ ವಾರ್ಷಿಕಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಮಹಾರಥೋತ್ಸವದೊಂದಿಗೆ ಜಾತ್ರೆಗೆ ತೆರೆಬಿದ್ದಿತು.

ಶುಕ್ರವಾರ ಸಂಜೆ ವಿವಿಧ ಮಂಗಳವಾದ್ಯಗಳ ಸಮೇತ ಶಿವಪುರದಿಂದ ದೇವಸ್ಥಾನದವರೆಗೆ ಶ್ರೀಮಾರ್ಕಂಡೇಶ್ವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ನಂತರ ಅಹೋರಾತ್ರಿ ಶಿವಭಜನೆ, ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಶನಿವಾರ ಬೆಳಿಗ್ಗೆ ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ವಿಶೇಷಪೂಜೆ, ಪುಷ್ಪಾರ್ಚನೆ ನಡೆಯಿತು. ತುಂಗಭದ್ರಾನದಿಯಲ್ಲಿ ಪುಣ್ಯಸ್ನಾನಮಾಡಿದ ಸಹಸ್ರಾರು ಭಕ್ತರು ಸರತಿಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಂತರ ಉಚ್ಚಾಯ ಉತ್ಸವ, ಅನ್ನಸಂತರ್ಪಣೆ ನಡೆಯಿತು. ಸಂಜೆ ನಡೆದ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯರು, ನಗರಗಡ್ಡಿಮಠದ ಶಾಂತಲಿಂಗೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ಧಾರ್ಮಿಕದತ್ತಿ ಇಲಾಖೆಗೆ ದೇವಸ್ಥಾನ ಸೇರ್ಪಡೆಯಾದ ನಂತರ ಪ್ರಥಮಬಾರಿಗೆ ರಥವನ್ನು ಉತ್ತರಾಭಿಮುಖವಾಗಿ ಎಳೆಯಲಾಯಿತು. ಸಾವಿರಾರು ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಸಂಭ್ರಮಿಸಿದರು. ದೇವಸ್ಥಾನ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ ಜೆ.ಬಿ.ಮಜ್ಜಿಗಿ, ಉಪತಹಶೀಲ್ದಾರ ರೇಖಾದೀಕ್ಷಿತ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮತ್ತು ಸುತ್ತಲಿನ ಅನೇಕರು ಪಾಲ್ಗೊಂಡಿದ್ದರು. ರಥೋತ್ಸವದ ನಂತರ ಮದ್ದುಸುಡುವ ಕಾರ್ಯಕ್ರಮ ನಡೆಯಿತು.

ಶ್ರೀಮಾರ್ಕಂಡೇಶ್ವರ ಸನ್ನಿಧಾನ ಹಸಿರುಹೊತ್ತ ಬತ್ತದ ಗದ್ದೆಗಳಿಂದ ಆವೃತ್ತವಾಗಿದ್ದು ಭಕ್ತರ ಕಣ್ಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.