ADVERTISEMENT

ಕುಷ್ಟಗಿ: ರೈತ ಸ್ನೇಹಿ ನಿಡಶೇಸಿ ಮಾದರಿ ತೋಟಗಾರಿಕೆ ಸಸ್ಯ ಕ್ಷೇತ್ರ

ನಾರಾಯಣರಾವ ಕುಲಕರ್ಣಿ
Published 14 ಜನವರಿ 2022, 3:03 IST
Last Updated 14 ಜನವರಿ 2022, 3:03 IST
ಎರೆಜಲ ಉತ್ಪಾದನೆ ಘಟಕ
ಎರೆಜಲ ಉತ್ಪಾದನೆ ಘಟಕ   

ಕುಷ್ಟಗಿ: ಸುಸ್ಥಿರ ಮತ್ತು ಸಂಪೂರ್ಣ ಸಾವಯವ ಅಷ್ಟೇ ಅಲ್ಲ. ಸಮಗ್ರ ಕೃಷಿಯಲ್ಲಿ ತೊಡಗುವ ನಿಟ್ಟಿನಲ್ಲಿ ಪರಿಪೂರ್ಣ ಮಾಹಿತಿ ನೀಡುವ ನಿಟ್ಟಿನಲ್ಲಿ ತಾಲ್ಲೂಕಿನ ನಿಡಶೇಸಿ ಗ್ರಾಮದ ಬಳಿ ಇರುವ ಸರ್ಕಾರದ ಮಾದರಿ ತೋಟಕಾರಿಕೆ ಸಸ್ಯ ಕ್ಷೇತ್ರವು ಕೃಷಿ ಅಥವಾ ತೋಟಗಾರಿಕೆ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ರೈತರಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ.

58 ಎಕರೆ ವಿಸ್ತೀರ್ಣದ ರಾಜ್ಯ ವಲಯಕ್ಕೆ ಸೇರಿದ ಸದ್ಯ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿಯ ಉಸ್ತುವಾರಿಯಲ್ಲಿನ ಈ ತೋಟಗಾರಿಕೆ ಕ್ಷೇತ್ರ ವಿವಿಧ ರೀತಿಯಲ್ಲಿ ಅಭಿವೃದ್ಧಿ ಹೊಂದಿ ರೈತರಿಗೆ ಮಾರ್ಗದರ್ಶನ ನೀಡುವ ಮೂಲಕ ರೈತರು, ತಂತ್ರಜ್ಞರು, ವಿದ್ಯಾರ್ಥಿಗಳ ಮತ್ತು ಮಹಿಳಾ ಸಂಘಗಳನ್ನು ತನ್ನತ್ತ ಸೆಳೆಯುತ್ತಿದೆ.

ಇಸ್ರೇಲ್‌ ತಂತ್ರಜ್ಞಾನ: ಕಡಿಮೆ ಖರ್ಚು, ನೀರಿನ ಕೊರತೆಯಲ್ಲೂ ತೋಟಗಾರಿಕೆ ಹಾಗೂ ಇತರೆ ಉಪ ಕಸುಬುಗಳನ್ನು ಹೇಗೆ ನಿರ್ವಹಿಸಬಹುದು ಎಂಬ ಬಗ್ಗೆ ಹೊಸ ಹೊಸ ಪ್ರಯೋಗಗಳನ್ನು ಒಳಗೊಂಡ ಇಸ್ರೇಲ್‌ ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳು ಇಲ್ಲಿ ಕಾಣಸಿಗುತ್ತವೆ.

ADVERTISEMENT

ಸಸ್ಯಗಳಿಗೆ ಅಗತ್ಯವಾದಷ್ಟು ನೀರು ಪೂರೈಸುವ ಸೆನ್ಸಾರ್‌ ಆಧಾರಿತ ಸ್ವಯಂ ಚಾಲಿತ ಹನಿ ನೀರಾವರಿ ವ್ಯವಸ್ಥೆಯು ಇಲ್ಲಿದೆ. ವಿವಿಧ ರೀತಿಯ ಸಸ್ಯಾಭಿವೃದ್ಧಿಗೊಳಿಸಿ ರೈತರಿಗೆ ತೋಟಗಾರಿಕೆ ಇಲಾಖೆಯ ಯೋಜನೆಗಳ ಮೂಲಕ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಸರ್ಕಾರ ಈ ಕ್ಷೇತ್ರಕ್ಕೆ ನೀಡುವ ವಾರ್ಷಿಕ ಅನುದಾನಕ್ಕೆ ಪ್ರತಿಯಾಗಿ ಶೇಕಡ 10ರಷ್ಟು ಲಾಭಾಂಶ ತೋರಿಸುವುದರ ಜೊತೆಗೆ ರೈತರಿಗೂ ಇಲ್ಲಿಯ ಚಟುವಟಿಕೆಗಳನ್ನು ಪರಿಚಯ ಮಾಡಿಕೊಡಬೇಕಾಗಿರುವುದು ಇಲ್ಲಿನ ಪ್ರಮುಖ ಸಂಗತಿ.

ಪೇರಲ, ಪಪ್ಪಾಯ, ದಾಳಿಂಬೆ, ಡ್ರ್ಯಾಗನ್‌ಫ್ರೂಟ್‌, ನಿಂಬೆ, ಕರಿಬೇವು ಇತರೆ ಹಣ್ಣುಗಳು, ವಿವಿಧ ತರಕಾರಿ ಹೀಗೆ ಗುಣಮಟ್ಟದ ಮತ್ತು ರೋಗ ರಹಿತ ಸಸಿಗಳ ಅಭಿವೃದ್ಧಿಪಡಿಸಲಾಗುತ್ತಿದೆ.

ಇಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆ ಇಲ್ಲ ಅದರ ಬದಲು ಸಾವಯವ ಕೃಷಿ ಉತ್ತೇಜಿಸಲು ತರಬೇತಿ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಎರೆಹುಳು ಗೊಬ್ಬರ ಮತ್ತು ಎರೆಜಲಕ್ಕೆ ರೈತರು ಹೆಚ್ಚಿನ ಮಹತ್ವ ನೀಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಅದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಎರೆಹುಳು ಗೊಬ್ಬರ ತಯಾರಿಸಿ ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ.

ಎರೆಜಲ ಬಳಕೆಯಿಂದ ಸಸ್ಯಗಳಿಗೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಹನಿ ನೀರಾವರಿ ಮೂಲಕ ಇದನ್ನು ನೀಡುವುದು, ಸಿಂಪಡಣೆ ಮಾಡುವುದರಿಂದ ಸಸ್ಯಗಳಿಗೆ ಗ್ಲೂಕೋಸ್‌ ನೀಡಿದಂತಾಗುತ್ತದೆ. ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೊಪ್ಪಳ ಜಿಲ್ಲೆಗೆ 4 ಲಕ್ಷ ಲೀಟರ್ ಎರೆ ಜಲ ಪೂರೈಸುವುದು ಈ ಕ್ಷೇತ್ರಕ್ಕೆ ಗುರಿ ನಿಗದಿ ಪಡಿಸಲಾಗಿದೆ. ಅಷ್ಟೇ ಅಲ್ಲ ತೊಗರಿ ಬೆಳೆಗೆ ಸಿಂಪಡಣೆ ಮಾಡಿದ ನಂತರ ಉತ್ತಮ ಫಲಿತಾಂಶ ಬಂದಿದ್ದರಿಂದ ಕಲಬುರಗಿ ಭಾಗದ ಬಹಳಷ್ಟು ರೈತರು ಇಲ್ಲಿಗೆ ಬಂದು ಎರೆಜಲ ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ಆಂಜನೇಯ ದಾಸರ ‘ಪ್ರಜಾವಾಣಿ’ಗೆ ವಿವರಿಸಿದರು.

ಸದ್ಯ ಹೈಟೆಕ್‌ ನರ್ಸರಿ, ಜೇನು ಕೃಷಿ, ಕುರಿ, ಸ್ನೇಕ್‌ಹೆಡ್‌ (ಕೊರ್ವೆ) ವಿಶೇಷ ತಳಿಯ ಮೀನುಗಳ ಪ್ರಾಯೋಗಿಕ ಉತ್ಪಾದನೆ, ಹೈನುಗಾರಿಕೆ, ದೇಶಿ ತಳಿ ಹಸುಗಳ ಅಭಿವೃದ್ಧಿಯನ್ನು ಇಲ್ಲಿ ಗಮನಿಸಬಹುದು. ಮುಂದೆ ರೇಷ್ಮೆ ಕೃಷಿಗೆ ಉತ್ತೇಜನ ನೀಡುವುದು, ಗುಜರಾತ್‌ದಿಂದ ಗಿರ್‌ ತಳಿ ಹಸು ಖರೀದಿಸಲಾಗಿದ್ದು ಇದರಿಂದ ಮುಂದೆ ಕರುಗಳ ಮೂಲಕ ತಳಿ ಅಭಿವೃದ್ಧಿಪಡಿಸುವುದು ಅದರಿಂದ ಜೀವಾಮೃತ, ಪಂಚಗವ್ಯ ತಯಾರಿಸುವ ಉದ್ದೇಶವಿದೆ.ಬೇವಿನಬೀಜ ಖರೀದಿಸಿ ಎಣ್ಣೆ ಮತ್ತು ಕೇಕ್‌ ತಯಾರಿಸುವ ಯಂತ್ರಗಳು ಬಂದಿವೆ. ನಿಡಶೇಸಿ ತೋಟಗಾರಿಕೆ ಕ್ಷೇತ್ರಕ್ಕೆ ರೈತರು ಒಮ್ಮೆಯಾದರೂ ಭೇಟಿ ನೀಡಬೇಕು.

*ಇಲ್ಲಿಯ ಮಾದರಿಗಳನ್ನು ಅನುಸರಿಸಿ ತೋಟಗಾರಿಕೆಯಲ್ಲಿ ರೈತರು ಪ್ರಗತಿ ಸಾಧಿಸಬೇಕೆಂಬುದು ಈ ಕ್ಷೇತ್ರದ ಹಿಂದಿರುವ ಮುಖ್ಯ ಉದ್ದೇಶ
– ಆಂಜನೇಯ ದಾಸರ, ಸಹಾಯಕ ತೋಟಗಾರಿಕೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.