ADVERTISEMENT

ತೊಗರಿ ಖರೀದಿ ಕೇಂದ್ರ ತೆರೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 6:40 IST
Last Updated 5 ಡಿಸೆಂಬರ್ 2025, 6:40 IST
ಕುಷ್ಟಗಿ ತಾಲ್ಲೂಕಿನಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ ಅಶೋಕ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದರು
ಕುಷ್ಟಗಿ ತಾಲ್ಲೂಕಿನಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ ಅಶೋಕ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದರು   

ಕುಷ್ಟಗಿ: ರೈತರು ಬೆಳೆದ ತೊಗರಿ ಬೆಳೆಯನ್ನು ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಅಶೋಕ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದರು.

‘ಕಳೆದ ಒಂದು ತಿಂಗಳಿನಿಂದ ತೊಗರಿ ಬೆಳೆ ಕಟಾವು ನಡೆಯುತ್ತಿದೆ. ಮಾರುಕಟ್ಟೆಗೆ ರೈತರು ತೊಗರಿಯನ್ನು ಮಾರಾಟಕ್ಕೆ ತರುತ್ತಿದ್ದು, ಬೆಲೆ ಕುಸಿತದಿಂದ ಹಾನಿ ಅನುಭವಿಸುತ್ತಿದ್ದಾರೆ. ಸರ್ಕಾರ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿದರೆ ರೈತರನ್ನು ಸಂಕಷ್ಟದಿಂದ ಪಾರುಮಾಡಲು ಸಾಧ್ಯ’ ಎಂದರು.

‘ತೊಗರಿ ಖರೀದಿ ಕೇಂದ್ರ ತೆರೆಯಲು ಕೇಂದ್ರ ಸರ್ಕಾರಕ್ಕೆ ಎರಡು ತಿಂಗಳು ಮೊದಲೇ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕಿತ್ತು. ಅದೇ ರೀತಿ ಮೆಕ್ಕೆಜೋಳ ಖರೀದಿ ವಿಚಾರದಲ್ಲೂ ವಿಳಂಬ ನೀತಿ ಅನುಸರಿಸಿದ್ದರಿಂದ ಮೆಕ್ಕೆಜೋಳ ಬೆಳೆಗಾರರು ತೊಂದರೆ ಅನುಭವಿಸಿದರು’ ಎಂದರು.

ADVERTISEMENT

‘ತಡವಾಗಿ ಎಚ್ಚೆತ್ತುಕೊಂಡಿರುವ ಸರ್ಕಾರ ಖರೀದಿ ಹೆಸರಿನಲ್ಲಿ ರೈತರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಈಗಲಾದರೂ ಹೋಬಳಿಗೆ ಒಂದರಂತೆ ಖರೀದಿ ಕೇಂದ್ರ ತೆರೆಯಬೇಕು. ಅಲ್ಲದೆ ತೊಗರಿ ಬೆಳೆಗೆ ಪ್ರತಿ ಕ್ವಿಂಟಲ್‌ಗೆ ₹1,200 ಪ್ರೋತ್ಸಾಹಧನ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ರಾಜ್ಯ ಅಧ್ಯಕ್ಷ ಡಿ.ಎಚ್‌.ಪೂಜಾರ, ಪ್ರಮುಖರಾದ ಬಸವರಾಜ ನೆರೆಗಲ್, ದೇವಪ್ಪ ಕಂಬಳಿ, ರಗಡಪ್ಪ, ಹುಸೇನಪ್ಪ, ದ್ಯಾಮಮ್ಮ, ಹೊಳಿಯಮ್ಮ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.