ಕೊಪ್ಪಳ: ಎರಡ್ಮೂರು ದಿನಗಳಿಂದ ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಯೂರಿಯಾ ರಸಗೊಬ್ಬರಕ್ಕೆ ಮತ್ತೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದ್ದು, ಬುಧವಾರ ಇಲ್ಲಿನ ಬಸವೇಶ್ವರ ವೃತ್ತದ ಬಳಿಯ ತಾಲ್ಲೂಕು ಒಕ್ಕುಲತನ ಹುಟ್ಟುವಳಿ ಸಹಕಾರ ಸಂಘದ ಮುಂಭಾಗದಲ್ಲಿ ಚೀಟಿ ಪಡೆದುಕೊಳ್ಳಲು ರೈತರು ದುಂಬಾಲು ಬಿದ್ದರು.
ಮಳೆಯಾದಾಗಲೆಲ್ಲ ರಸಗೊಬ್ಬರಕ್ಕೆ ಸಾಕಷ್ಟು ಬೇಡಿಕೆ ಬರುತ್ತದೆ. ಜಿಲ್ಲೆಗೆ ಅಗತ್ಯವಿರುವಷ್ಟು ಯೂರಿಯಾ ಬರುತ್ತಿದ್ದರೂ ಬೇಡಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಮುಂಗಾರು ಹಂಗಾಮಿನಲ್ಲಿ ಸೆಪ್ಟೆಂಬರ್ ತನಕ ಜಿಲ್ಲೆಗೆ ಒಟ್ಟು 51 ಸಾವಿರ ಮೆಟ್ರಿಕ್ ಟನ್ ಬೇಡಿಕೆಯಿದ್ದು, ಇದುವರೆಗೂ 42 ಸಾವಿರ ಮೆಟ್ರಿಕ್ ಟನ್ ಬಂದಿದೆ. ಬುಧವಾರ 43 ಟನ್ ಬಂದಿದ್ದು, ಇದನ್ನು ಗುರುವಾರ ಹಂಚಲಾಗುತ್ತದೆ. ಅದಕ್ಕೆ ಮುನ್ನಾದಿನ ಚೀಟಿ ನೀಡಲಾಯಿತು.
ಕೃಷಿ ಇಲಾಖೆ ಒಟ್ಟು ಒಂದು ಸಾವಿರ ಜನರಿಗೆ ರಸಗೊಬ್ಬರ ಚೀಟಿ ಕೊಡಲು ಯೋಜನೆ ರೂಪಿಸಿಕೊಂಡಿತ್ತು. ಬೆಳಗಿನ ಜಾವದಿಂದಲೇ ಸರತಿಯಲ್ಲಿ ಚೀಟಿ ಪಡೆಯಲು ರೈತರು ನಿಂತಿದ್ದರಿಂದ ಇಲಾಖೆ 1,500 ಚೀಟಿಗಳನ್ನು ನೀಡಲು ಮುಂದಾದರೂ ರೈತರ ನೂಕಾಟ–ತಳ್ಳಾಟ ಮಾತ್ರ ಕಡಿಮೆಯಾಗಲಿಲ್ಲ.
‘ಹಲವು ತಾಸು ಸರತಿಯಲ್ಲಿ ನಿಂತರೂ ರಸಗೊಬ್ಬರಕ್ಕೆ ಚೀಟಿ ಸಿಕ್ಕಿಲ್ಲ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ವ್ಯಾಪ್ತಿಯಲ್ಲಿ ಹಲವು ಸೊಸೈಟಿಗಳಿಗೆ ನೇರವಾಗಿ ಯೂರಿಯಾ ನೀಡುತ್ತಿದ್ದರೂ ಅನೇಕ ರೈತರು ಜಿಲ್ಲಾ ಕೇಂದ್ರಕ್ಕೆ ಬಂದಿದ್ದರು. ಇನ್ನೂ ಕೆಲವು ರೈತರು,‘ನಮ್ಮೂರಿನ ಸೊಸೈಟಿಯಲ್ಲಿ ಗೊಬ್ಬರ ಸಿಕ್ಕರೆ ಇಲ್ಲಿಗೆ ಬಂದು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.
ಎಸ್.ಪಿ. ಮೊಕ್ಕಾಂ: ಪರಿಸ್ಥಿತಿ ಕೈ ಮೀರುತ್ತಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಶಿಸ್ತುಬದ್ಧವಾಗಿ ರಸಗೊಬ್ಬರ ವಿತರಣೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಿದರೂ ರೈತರು ಕೇಳಲಿಲ್ಲ. ಎಸ್.ಪಿ ಡಾ.ರಾಮ್ ಎಲ್. ಅರಸಿದ್ಧಿ ಹಾಗೂ ಇತರ ಅಧಿಕಾರಿಗಳು,‘ಎಲ್ಲರಿಗೂ ಚೀಟಿ ಸಿಗುತ್ತದೆ. ತಾಳ್ಮೆಯಿಂದ ಕಾಯಬೇಕು’ ಎಂದು ಮನವಿ ಮಾಡಿದರೂ ಕಿವಿಗೊಡಲಿಲ್ಲ. ಬಳಿಕ ಬಂದೋಬಸ್ತ್‌ಗೆ ಮತ್ತಷ್ಟು ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು.
ರಸಗೊಬ್ಬರ ಸಿಗದೆ ಎಂಟು ದಿನಗಳಾದವು. ಬೆಳಿಗ್ಗೆ ನಾಲ್ಕು ಗಂಟೆಗೆ ಬಂದು ಸರತಿಯಯಲ್ಲಿ ನಿಂತಿದ್ದೆ. ಮೆಕ್ಕೆಜೋಳ ಬೆಳೆದಿದ್ದೇನೆ. ಗೊಬ್ಬರದ ಅಗತ್ಯವಿದೆರಾಮನಗೌಡ ಚಿಲವಾಡಿಗೆ, ಗ್ರಾಮದ ರೈತ
ಮೂರು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದೇನೆ. ನಮ್ಮೂರಿನ ಸೊಸೈಟಿಯಲ್ಲಿ ಗೊಬ್ಬರ ಸಿಗದ ಕಾರಣ ಕೊಪ್ಪಳಕ್ಕೆ ಬಂದಿದ್ದೇನೆ. ನಮ್ಮೂರಿನಲ್ಲಿಯೇ ಸಿಕ್ಕರೆ ಇಲ್ಲಿಗೆ ಯಾಕೆ ಬರುತ್ತಿದ್ದೆಯಂಕಪ್ಪ ಇರಕಲ್ಲಗಡ, ಗ್ರಾಮದ ರೈತ
ಕೊಪ್ಪಳ ಹೊರತುಪಡಿಸಿ ಜಿಲ್ಲೆಯ ಬೇರೆ ಎಲ್ಲಿಯೂ ಸಮಸ್ಯೆಯಿಲ್ಲ. ಜಿಲ್ಲೆಗೆ ನಿಗದಿಯಾದಷ್ಟು ಗೊಬ್ಬರ ಬಂದಿದೆ. ಸೆಪ್ಟೆಂಬರ್‌ನಲ್ಲಿ ಪಡೆಯಬೇಕಾದ ಗೊಬ್ಬರ ಈಗಲೇ ಬೇಕು ಎನ್ನುತ್ತಿರುವುದರಿಂದ ಸಮಸ್ಯೆಯಾಗುತ್ತಿದೆರುದ್ರೇಶಪ್ಪ ಟಿ.ಎಸ್. ಕೃಷಿ ಇಲಾಖೆ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.