ADVERTISEMENT

ಗಂಗಾವತಿ: ಸಂಜೆ ತನಕ ಹೋರಾಟ, ಬಳಿಕ ವಾಪಸ್‌

ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 16:18 IST
Last Updated 11 ಫೆಬ್ರುವರಿ 2025, 16:18 IST
ಗಂಗಾವತಿಯಲ್ಲಿ ಮಂಗಳವಾರ ಅಖಿಲ ಭಾರತ ಕಾರ್ಮಿಕ ಸಂಘಟನೆ ಕಾರ್ಯಕರ್ತರು, ನಗರಸಭೆ ಪೌರಕಾರ್ಮಿಕರು, ವಾಹನ ಚಾಲಕರು, ಕಾವಲುಗಾರರು ಬಾಕಿವೇತನ ಪಾವತಿಸಲು ಒತ್ತಾಯಿಸಿ ಧರಣಿ ನಡೆಸಿದರು
ಗಂಗಾವತಿಯಲ್ಲಿ ಮಂಗಳವಾರ ಅಖಿಲ ಭಾರತ ಕಾರ್ಮಿಕ ಸಂಘಟನೆ ಕಾರ್ಯಕರ್ತರು, ನಗರಸಭೆ ಪೌರಕಾರ್ಮಿಕರು, ವಾಹನ ಚಾಲಕರು, ಕಾವಲುಗಾರರು ಬಾಕಿವೇತನ ಪಾವತಿಸಲು ಒತ್ತಾಯಿಸಿ ಧರಣಿ ನಡೆಸಿದರು   

ಗಂಗಾವತಿ: ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ನಗರಸಭೆ ಎದುರು ಅಖಿಲ ಭಾರತ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಪೌರಕಾರ್ಮಿಕರು, ವಾಹನ ಚಾಲಕ, ಕಾವಲುಗಾರ, ತೋಟಿಗ, ಲೋಡರ್ಸ್‌ಗಳು ಸೋಮವಾರ ಆರಂಭಿಸಿದ್ದ ಧರಣಿ ಮಂಗಳವಾರ ಮುಕ್ತಾಯವಾಯಿತು.

ಧರಣಿ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ, ಅಧ್ಯಕ್ಷ ಮೌಲಾಸಾಬ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ಭೇಟಿ ನೀಡಿ ಬೇಡಿಕೆಗಳು ಈಡೇರಿಸುವ ಭರವಸೆ ನೀಡಿದರು. ಆದ್ದರಿಂದ ಧರಣಿ ಅಂತ್ಯಕಂಡಿತು. ಡಿಸೆಂಬರ್‌ವರೆಗಿನ ವೇತನ ಪಾವತಿಗೆ ಚೆಕ್ ಸಂದಾಯ ಮಾಡಲು ಅಧಿಕಾರಿಗಳನ್ನು ಬ್ಯಾಂಕ್‌ಗೆ ಕಳುಹಿಸಿದರು. ನಂತರ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಟಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ‘ಪೌರಾಯುಕ್ತರು ನಗರಸಭೆ ಪೌರಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯ, ಬಾಕಿ ವೇತನ ಎಲ್ಲವನ್ನ ಅಚ್ಚುಕಟ್ಟಾಗಿ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ದುರುದ್ದೇಶದ ಧರಣಿ: ನಗರಸಭೆ ಹೊರಗುತ್ತಿಗೆ ನೌಕರರಿಗೆ ನಿಗದಿತ ಸಮಯಕ್ಕೆ ವೇತನ ಪಾವತಿ ಮಾಡಲಾಗುತ್ತಿದೆ. ಬಾಕಿ ವೇತನ ಪಾವತಿಸುವ ಭರವಸೆ ನೀಡಿದರೂ, ಕೆಲವರು ಸಂಘಟನೆಗಳ ಮುಖಂಡರ ಪ್ರಚೋದನೆಗೆ ಒಳಗಾಗಿ ದುರುದ್ದೇಶದಿಂದ ಧರಣಿ ನಡೆಸುತ್ತಿದ್ದಾರೆ ಎಂದು ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಆರೋಪಿಸಿದರು.

ದೂರು: ನಗರಸಭೆ ಹೊರಗುತ್ತಿಗೆ ನೌಕರರು ತ್ಯಾಜ್ಯ ವಿಲೇವಾರಿ ವಾಹನ ಚಾಲಕರು ವಾಹನಗಳ ಕೀಗಳನ್ನು ಹಸ್ತಾಂತರಿಸದೇ ಧರಣಿಯಲ್ಲಿ ಪಾಲ್ಗೊಂಡಿದ್ದರಿಂದ ಕೀ ಹಸ್ತಾಂತರಿಸುವಂತೆ ಪೌರಾಯುಕ್ತರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಸಣ್ಣ ಹನುಮಂತಪ್ಪ, ಪರಶುರಾಮ, ಕೇಶವ ನಾಯಕ, ಬಾಬರ, ರಮೇಶ, ಕನಕಪ್ಪ ನಾಯಕ, ಭೀಮಣ್ಣ, ಮಾಯಮ್ಮ, ಪಾರ್ವತಮ್ಮ, ಹೊನ್ನಾಳಪ್ಪ, ಕೊಟ್ರೇಶ, ಹುಲಿಗೆಮ್ಮ, ಕೆಂಚಮ್ಮ, ಹೇಮಣ್ಣ ಸೇರಿ ಪೌರಕಾರ್ಮಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.