ADVERTISEMENT

ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸಿ

ಗಂಗಾಮತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಈ.ಧನರಾಜ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 11:26 IST
Last Updated 15 ಜನವರಿ 2021, 11:26 IST

ಗಂಗಾವತಿ: ‘ಗಂಗಾಮತ ಸಮಾಜವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಕಳೆದ 40 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ರಾಜಕಾರಣಿಗಳು ಸ್ಪಂದಿಸುತ್ತಿಲ್ಲ. ಸಮಾಜವನ್ನು ಕಡೆಗಣಿಸುತ್ತಿದ್ದಾರೆ’ ಎಂದು ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಈ.ಧನರಾಜ ಆರೋಪಿಸಿದರು.

‘ಗಂಗಾಮತ, ಕೋಲಿ, ಮೊಗವೀರ ಸೇರಿದಂತೆ 39 ಪರ್ಯಾಯ ಪದಗಳಿಂದ ಗುರುತಿಸಿಕೊಂಡಿರುವ ಸಮಾಜ ದೇಶದ 9 ರಾಜ್ಯಗಳಲ್ಲಿ ಎಸ್ಟಿ ಪಟ್ಟಿಯಲ್ಲಿದೆ. ಆದರೂ ಪದೇ, ಪದೇ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ’ ಎಂದರು.

‘ಸಮಾಜ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಸುಣಗಾರಿಕೆ, ಮೀನುಗಾರಿಕೆ ಸೇರಿ ಹತ್ತು ಹಲವು ಸಾಂಪ್ರದಾಯಿಕ ಕಸಬುಗಳಲ್ಲಿ ತೊಡಗಿಕೊಂಡಿದೆ. ಈ ಹಿಂದೆ ಮೀಸಲಾತಿ ಭರವಸೆ ನೀಡಿ ಹಲವು ಪಕ್ಷಗಳು ಅಧಿಕಾರಕ್ಕೆ ಬಂದವು, ಆದರೆ ಬೇಡಿಕೆ ಈಡೇರಿಸಲಿಲ್ಲ’ ಎಂದು ದೂರಿದರು.

ADVERTISEMENT

‘ಮಾನವಶಾಸ್ತ್ರ, ಕುಲಶಾಸ್ತ್ರ, ಬುಡಕಟ್ಟು ಅಧ್ಯಯನದ ಆಧಾರದನ್ವಯ ನಮ್ಮ ಸಮಾಜ ಎಸ್ಟಿ ಪಟ್ಟಿಗೆ ಸೇರಲು ತಾಂತ್ರಿಕವಾಗಿ ಬಲಿಷ್ಟವಾಗಿದೆ. ಕೇಂದ್ರ ಸರ್ಕಾರದ ಅಪ್ಪಣೆ ಬೇಕಾಗಿದೆ‌. ಎರಡು-ಮೂರು ತಿಂಗಳಲ್ಲಿ ನಮ್ಮ ಬೇಡಿಕೆ ಈಡೇರದೆ ಹೋದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಅಂಬಿಗರ ಚೌಡಯ್ಯ ಯುವಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಶ ಭಟಾರಿ ಮಾತನಾಡಿ,‘ನಮ್ಮ ಸಮಾಜ ತೀರಾ ಹಿಂದುಳಿದ ಸಮಾಜವಾಗಿದೆ. ಬಹುದಿನದ ಬೇಡಿಕೆಯಾಗಿರುವ ಎಸ್ಟಿ ಮೀಸಲಾತಿಯನ್ನು ಸರ್ಕಾರ ನೀಡಬೇಕು. ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು’ ಎಂದು ಹೇಳಿದರು.

ಸಮಾಜದ ಪ್ರಮುಖರಾದ ಬಿ.ಅಶೋಕಪ್ಪ, ಅಂಬಿಗರ ಆಂಜಿನಪ್ಪ, ಎಚ್.ವೈ.ಮನಗೂಳಿ, ಹುಲಗಪ್ಪ, ಯಮನೂರಪ್ಪ ಹಾಗೂ ಮಾರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.