ADVERTISEMENT

ಹನುಮಸಾಗರ: ಅತಿಯಾದ ತೇವಾಂಶ, ಹೂವು ಕಟ್ಟದ ಕಡಲೆ ಬೆಳೆ

ಬೆಳೆಯಲ್ಲಿ ಕಡಿಮೆಯಾದ ಹುಳಿ ಅಂಶ

ಕಿಶನರಾವ್‌ ಕುಲಕರ್ಣಿ
Published 8 ಡಿಸೆಂಬರ್ 2021, 19:30 IST
Last Updated 8 ಡಿಸೆಂಬರ್ 2021, 19:30 IST
ಹನುಮಸಾಗರ ಭಾಗದ ಜಮೀನಿನಲ್ಲಿ ಕೀಟದಿಂದಾಗಿ ಹಾಳಾಗಿರುವ ಕಡಲೆ ಬೆಳೆಯೊಂದಿಗೆ ರೈತ ಮಲ್ಲಿಕಾರ್ಜುನ ದೋಟಿಹಾಳ
ಹನುಮಸಾಗರ ಭಾಗದ ಜಮೀನಿನಲ್ಲಿ ಕೀಟದಿಂದಾಗಿ ಹಾಳಾಗಿರುವ ಕಡಲೆ ಬೆಳೆಯೊಂದಿಗೆ ರೈತ ಮಲ್ಲಿಕಾರ್ಜುನ ದೋಟಿಹಾಳ   

ಹನುಮಸಾಗರ: ಅತಿಯಾದ ಮಳೆಯ ಕಾರಣವಾಗಿ ಕಡಲೆ ಬೆಳೆಯಲ್ಲಿ ಉತ್ಪಾದನೆಯಾದ ಹುಳಿ ಅಂಶ (ಮ್ಯಾಲಿಕ್ ಎಸಿಡ್) ಕಡಿಮೆಯಾಗಿರುವ ಕಾರಣವಾಗಿ ಕಡಲೆ ಗಿಡಗಳು ಬೆಳೆಯುತ್ತಿವೆಯೆ ವಿನಃ ಹೂವು, ಕಾಯಿ ಕಟ್ಟುತ್ತಿಲ್ಲ. ಅಲ್ಲದೆ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಕೀಡೆ ಬಾಧೆ ಹೆಚ್ಚಾಗಿರುವುದು ಕಡಲೆ ಬೆಳೆದ ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಅತಿಯಾದ ಮಳೆಗೆ ಮುಂಗಾರು ಬೆಳೆ ಸಂಪೂರ್ಣ ಹಾಳಾಗಿದ್ದು ಹಿಂಗಾರು ಬೆಳೆಯಾಗಿ ಕೈಹಿಡಿದಿತು ಎಂಬ ಲೆಕ್ಕಾಚಾರದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಎರೆ ಜಮೀನು ಹೊಂದಿದ ರೈತರು ಬಿತ್ತನೆ ಮಾಡಿದ ಕಡಲೆ ಬೆಳೆ ಗೊಡ್ಡಾಗುತ್ತಿರುವುದು ರೈತರನ್ನು ಪೇಚಿಗೆ ಸಿಲುಕಿಸಿದಂತಾಗಿದೆ.

ಈ ಭಾಗದ ಅಡವಿಭಾವಿ, ಚಳಗೇರಿ, ಹನುಮಗಿರಿ, ಗುಡ್ಡದದೇವಲಾಪೂರ, ಹುಲಸಗೇರಿ, ಹೂಲಗೇರಿ ಭಾಗಗಳಲ್ಲಿ ಜೋಳಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ಕಡಲೆ ಬಿತ್ತನೆ ಮಾಡಿದ್ದಾರೆ.

ADVERTISEMENT

ಹಿಂಗಾರು ಬೆಳೆಗೆ ಸಾಮಾನ್ಯವಾಗಿ ರಾತ್ರಿ ಚಳಿ ಹಾಗೂ ಹಗಲಿನಲ್ಲಿ ಬಿಸಿಲು ಇದ್ದರೆ ಬೆಳೆಯಲ್ಲಿ ಹುಳಿ ಅಂಶ ಹೆಚ್ಚಾಗಿ ಹೂವು ಕಟ್ಟಲು ಕಾರಣವಾಗುತ್ತದೆ. ಈ ಹುಳಿ ಅಂಶ ಇದ್ದಾಗಲೆ ಕೀಡೆಗಳ ಪ್ರಮಾಣ ಕಡಿಮೆಯಾಗಿರುತ್ತದೆ. ಆದರೆ ಈ ಬಾರಿ ಚಳಿಯ ಪ್ರಮಾಣವೂ ಕಡಿಮೆ ಇದೆ. ಸದಾ ಮೋಡ ಕವಿದ ವಾತಾವರಣ ಅಲ್ಲದೆ ಹುಳಿ ಅಂಶ ಮಳೆಗೆ ತೊಳೆದು ಹೋಗಿದ್ದು, ಅತಿಯಾದ ತೇವಾಂಶದ ಕಾರಣವಾಗಿ ಕಡಲೆ ಬೆಳೆಯಲ್ಲಿ ಕೀಡೆಗಳು ಹೆಚ್ಚಾಗಿವೆ.

ಈಗಾಗಲೆ ಎರಡು ಬಾರಿ ಕ್ರಿಮಿನಾಶಕ ಸಿಂಪಡಣೆ ಮಾಡಿದ ರೈತರು ಕೀಡೆಗಳು ಹತೋಟಿಗೆ ಬಾರದ ಕಾರಣವಾಗಿ ಕೈಚೆಲ್ಲಿಕುಳಿತಿದ್ದಾರೆ.

‘ಈಗಾಗಲೇ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಕೀಟನಾಶಕ ಸಿಂಪಡಣೆ ಮಾಡಿದ್ದೇವೆ. ಕೀಡೆಗಳು ನಿಯಂತ್ರಣಕ್ಕೆ ಬಂದಿಲ್ಲ. ಇನ್ನೊಂದೆರಡು ಬಾರಿ ಕೀಟನಾಶಕ ಸಿಂಪಡಣೆ ಮಾಡಿ ಕೀಡೆಗಳನ್ನು ಹತೋಟಿಗೆ ತರಬಹುದು. ಆದರೆ, ಬೆಳೆ ಹೂವು ಕಟ್ಟುವ ಸಾಧ್ಯತೆ ಕಡಿಮೆ ಇರುವ ಕಾರಣವಾಗಿ ಹಾಗೂ ಈಗಾಗಲೇ ಹೂವು ಕಟ್ಟುವ ಅವದಿ ಮುಗಿದಿರುವುದರಿಂದ ನೀಟನಾಶಕ ಸಿಂಪಡಣೆ ಮಾಡುವುದು ವ್ಯರ್ಥ ಎಂದು ಕೈಬಿಟ್ಟಿದ್ದೇವೆ‘ ಎಂದು ಅಡವಿಭಾವಿ ಗ್ರಾಮದ ರೈತರಾದ ಮಲ್ಲಿಕಾರ್ಜುನ ದೋಟಿಹಾಳ ಶರಣಪ್ಪ, ಹನಮಸಾಗರ ಮಂಜು ಉಂಡಿ, ಹನುಮಪ್ಪ ಕುಮಟಗಿ ಹತಾಸೆ ವ್ಯಕ್ತಪಡಿಸಿದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಮಾಹಿತಿ ನೀಡಿ, ಕಡಲೆ ಬೆಳೆಯಲ್ಲಿ ಹುಳಿಗೆ ಪ್ರಾಮುಖ್ಯತೆ ಇದ್ದು ಅದು ಕಾಯಿಕಟ್ಟಲು ಮತ್ತು ಕೆಲ ಕೀಟಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.

ಜಡಿ ಮಳೆಗೆ ಹುಳಿ ತೊಳೆದು ಹೋದರೆ ಕಡಲೆ ಬೆಳೆಯ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಕೀಟಬಾಧೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ರೈತರು ಮೈಕ್ರೊನ್ಯೂಟ್ರೆಂಟ್ ಸಿಂಪಡಣೆ ಮತ್ತು ಕೀಟನಾಶಕ ಸಿಂಪಡಣೆ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಾದರೂ ಬೆಳೆ ಉಳಿಸಿಕೊಳ್ಳಬಹುದಾಗಿದೆ ಎಂದು ಹೇಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.