ADVERTISEMENT

ಕಾರಟಗಿ: ಹಗಲು ವೇಷಧಾರಿಯ ಸಾಧನೆಯ ಕಥನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:59 IST
Last Updated 1 ಜನವರಿ 2026, 5:59 IST
<div class="paragraphs"><p>ರಾಮಣ್ಣ ಸಿದ್ದಾಪುರ</p></div>

ರಾಮಣ್ಣ ಸಿದ್ದಾಪುರ

   

ಕಾರಟಗಿ: ಮನೋಜ್ಞ ಕಲಾ ಪ್ರೌಢಿಮೆಯ ಮೂಲಕ ಗಮನ ಸೆಳೆಯುತ್ತಿರುವ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಕಲಾವಿದ ರಾಮಣ್ಣ ಶಂಕ್ರಪ್ಪ ಸಿದ್ದಾಪುರ 2025ನೇ ಸಾಲಿನ ರಾಜ್ಯ ಜಾನಪದ ಅಕಾಡೆಮಿ ನೀಡುವ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬುಡ್ಗ ಜಂಗಮ ಸಮುದಾಯದ ಹಗಲು ವೇಷ ಕಲಾವಿದ ರಾಮಣ್ಣ ಅವರ ಸಾಧನೆ ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿದೆ. ಸಿದ್ದಾಪುರಕ್ಕೆಬಂದ ಜಾನಪದ ಅಕಾಡೆಮಿಯ 2ನೇಯ ಪ್ರಶಸ್ತಿ ಇದಾಗಿದೆ ಎಂಬುದು ಮತ್ತೊಂದು ವಿಶೇಷ. 2021ರಲ್ಲಿ ಇದೇ ಸಮುದಾಯದ ಶಿವಲಿಂಗಪ್ಪ ಮೀರಾಲಿಯವರಿಗೆ ಪ್ರಶಸ್ತಿ ಸಂದಿತ್ತು. ಈ ವರ್ಷವೂ ಗ್ರಾಮಕ್ಕೆ ಸಂದಿದ ಪ್ರಶಸ್ತಿ ಅಳಿವಿನಂಚಿಗೆ ಸಾಗಿರುವ ಕಲೆಯ ಉತ್ತೇಜನಕ್ಕೂ ನೆರವಾಗಿದೆ.

ADVERTISEMENT

ಬಾಲ್ಯದಿಂದಲೇ ಆಸಕ್ತಿ: 1954ರಲ್ಲಿ ಜನಿಸಿದ್ದ ರಾಮಣ್ಣ ಸಾಂಪ್ರದಾಯಿಕವಾಗಿ ಕುಟುಂಬದಿಂದ ನಡೆದುಕೊಂಡ ಬಂದ ಕಲೆಯತ್ತ ವಾಲಿದರು. ಇವರ ಕಲಾ ಪ್ರೇಮಕ್ಕೆ ಈಗ 71ರ ಪ್ರಾಯ. ಹಗಲುವೇಷದ ಜೊತೆಗೆ ಸಂಗೀತ ಕ್ಷೇತ್ರದಲ್ಲೂ ಸಾಧನೆ ಮೆರೆದಿದ್ದಾರೆ. ಹಾರ್ಮೋನಿಯಂ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಸಹಿತ ಇತರ ವಿಭಾಗದಲ್ಲೂ ಛಾಪು ಮೂಡಿಸಿದ್ದಾರೆ. ಜೊತೆಗೆ ತಬಲಾ, ಹಾರ್ಮೋನಿಂ ವಾದನದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

ಸಾಂಪ್ರಾದಾಯಿಕ ತತ್ವಪದ, ಭಜನೆಯ ಜೊತೆಗೆ ಮಹಾಭಾರತದ ಹಲವು ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಕಲೆಯನ್ನು ರಾಜ್ಯದ ಜೊತೆಗೆ ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾದಲ್ಲೂ ಹಗಲು ವೇಷದ ಕಲಾ ಪ್ರದರ್ಶನ ನೀಡಿದ್ದಾರೆ.

ರಾಮಣ್ಣ ಅವರ ಸಾಧನೆಗೆ ಸಾಹಿತ್ಯ ಸಮ್ಮೇಳನಗಳು, ಹಂಪಿ, ಆನೆಗೊಂದಿ, ಕನಕಗಿರಿ ಉತ್ಸವ ಸಹಿತ ವಿವಿಧೆಡೆಯ ಉತ್ಸವಗಳಲ್ಲಿ ಪ್ರಶಸ್ತಿ ಬಂದಿದೆ.

ಹಗಲುವೇಷದ ಕಲಾ ಸೇವೆಯನ್ನು ಗುರುತಿಸಿ ಜಾನಪದ ಆಕಾಡೆಮಿ ಪ್ರಶಸ್ತಿ ನೀಡಿದ್ದು ಖುಷಿ ನೀಡಿದೆ. ಇಳಿ ವಯಸ್ಸಿನಲ್ಲಿ ಲಭಿಸಿದ ಗೌರವ ಕಲೆಯ ಮೇಲಿನ ಪ್ರೀತಿ ಹೆಚ್ಚಿಸಿದೆ.
– ರಾಮಣ್ಣ ಸಿದ್ದಾಪುರ, ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.