ADVERTISEMENT

‘ಉಚಿತ ಟ್ಯಾಬ್ ವಿತರಿಸಲು ನಿರ್ಧಾರ’

ನಿಗಮಕ್ಕೆ ₹500 ಕೋಟಿ ನೀಡುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 3:34 IST
Last Updated 7 ನವೆಂಬರ್ 2021, 3:34 IST
ಎಚ್.ಹನುಮಂತಪ್ಪ
ಎಚ್.ಹನುಮಂತಪ್ಪ   

ಕೊಪ್ಪಳ: 8 ರಿಂದ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷಎಚ್.ಹನುಮಂತಪ್ಪ ಹೇಳಿದರು.

ಅವರು ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಉದ್ದೇಶಿಸಿ ಮಾತನಾಡಿದರು.

ಕಳೆದ ವರ್ಷದ ಲಭ್ಯ ಅನುದಾನದಲ್ಲಿ ರಾಜ್ಯದ ಎಲ್ಲ ಸಫಾಯಿ ಕರ್ಮಚಾರಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸಿದ್ದೇವೆ. ಪ್ರಸ್ತುತ ಕೋಲಾರ ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ನಿಗಮದಿಂದ ಅನುದಾನ ಖರ್ಚಾಗಿಲ್ಲ. ಉಳಿದ ಎಲ್ಲ ಜಿಲ್ಲೆಗಳಿಂದ ಸೌಲಭ್ಯಕ್ಕೆ ಅರ್ಜಿಗಳು ಬರುತ್ತಿದ್ದು, ಎಲ್ಲ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುತ್ತೇವೆ ಎಂದರು.

ADVERTISEMENT

2013ರ ಸಮೀಕ್ಷೆ ಪ್ರಕಾರ 1.43ಲಕ್ಷ ಸಫಾಯಿ ಕರ್ಮಚಾರಿಗಳಿದ್ದಾರೆ. ಅವರ ಅವಲಂಬಿತರು ಸೇರಿಸಿದರೆ ಒಟ್ಟು 25 ರಿಂದ 30 ಲಕ್ಷ ಜನರಿದ್ದಾರೆ. ಇವರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲು ಸಾಕಷ್ಟು ಅನುದಾನ ಬೇಕಾಗಿದೆ. ಕೋವಿಡ್‌ನಿಂದಾಗಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಆದರೂ ನಿಗಮಕ್ಕೆ ₹500 ಕೋಟಿ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಸರ್ಕಾರದ ನಿಯಮಗಳ ಪ್ರಕಾರ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕೆಲಸ ಮಾಡುವವರು ಮಾತ್ರ ಸಫಾಯಿ ಕರ್ಮಚಾರಿಗಳಾಗಿದ್ದಾರೆ. ಆದರೆ ಸರ್ಕಾರಿ ಕಚೇರಿ ಹಾಗೂ ಇತರ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವವರನ್ನು ಸಹ ಸಫಾಯಿ ಕರ್ಮಚಾರಿಗಳು ಎಂದು ಸೇರಿಸಲು ಮರು ಸಮೀಕ್ಷೆ ಮಾಡಲು ರಾಷ್ಟ್ರೀಯ ಕಾನೂನು ಶಾಲೆಗೆ ಮನವಿ ಮಾಡಿದ್ದೇನೆ ಎಂದರು.

ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಇಲ್ಲ. ಇದು ಯಾವ ನ್ಯಾಯ. ಅವರು ಮಾಡುವಂತಹ ಕೆಲಸ ಯಾರಿಂದಲೂ ಮಾಡುಲು ಸಾಧ್ಯವಿಲ್ಲ. ಆದ್ದರಿಂದ ಗುತ್ತಿಗೆ ಪದ್ಧತಿ, ನೇರ ಪಾವತಿ ವ್ಯವಸ್ಥೆಯನ್ನು ನಿಷೇಧಿಸಬೇಕು. ಎಲ್ಲ ಸಫಾಯಿ ಕಾರ್ಮಿಕರನ್ನು ಖಾಯಂಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.

ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಸೇರಿ ರಾಜ್ಯದ ಹತ್ತು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುವ ಮಹಿಳಾ ಸಫಾಯಿ ಕರ್ಮಚಾರಿಗಳಿಗೆ ₹1 ಲಕ್ಷ ಮೌಲ್ಯದ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನವನ್ನು ಶೇ 90 ರಷ್ಟು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲು ನಿರ್ಧರಿಸಿದ್ದು, ಒಟ್ಟು 400 ವಾಹನಗಳನ್ನು ಖರೀದಿ ಮಾಡಲಾಗುತ್ತಿದೆ. ಇದರಲ್ಲಿ 200 ವಾಹನಗಳನ್ನು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಇನ್ನೂ 200 ವಾಹನಗಳನ್ನು ಬಾಕಿ ಉಳಿದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನೀಡುತ್ತೇವೆ. ಅಲ್ಲದೇ 10ನೇ ತರಗತಿ ಹಾಗೂ ಪಿಯುಸಿ ಓದಿ ಖಾಲಿ ಇರುವ ಹಾಗೂ ಅರ್ಧಕ್ಕೆ ವಿದ್ಯಾಭ್ಯಾಸ ಬಿಟ್ಟವರಿಗೆ ಸ್ಯಾನಟರಿ ಇನ್ಸೆಕ್ಟರ್ ಡಿಪ್ಲೊಮಾ ಕೋರ್ಸ್ ಮಾಡಿಸುವ ವ್ಯವಸ್ಥೆಯನ್ನು ಮಾಡಿದ್ದು, ಅದರಿಂದ ಅವರಿಗೆ ಉದ್ಯೋಗವಕಾಶ ದೊರೆಯಲಿದೆ
ಎಂದರು.

ಕೆ.ಎಸ್.ಎಸ್.ಕೆ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಮಲ್ಲಿಕಾರ್ಜುನ, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ತಾಪಕ ಎ.ವೈ.ಕಾಳೆ, ಗಣೇಶ ಹೊರತಟ್ನಾಳ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.