ADVERTISEMENT

ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಬಿ.ಕಿಶನರಾವ್ ವೆಂಕಟರಾವ್ ವಿಧಿವಶ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 7:11 IST
Last Updated 4 ಆಗಸ್ಟ್ 2025, 7:11 IST
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಿ.ಕಿಶನರಾವ್ ಸನ್ಮಾನ ಸ್ವೀಕರಿಸಿದ್ದು
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಿ.ಕಿಶನರಾವ್ ಸನ್ಮಾನ ಸ್ವೀಕರಿಸಿದ್ದು   

ಕುಷ್ಟಗಿ: ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ, ವಕೀಲ ಬಿ.ಕಿಶನರಾವ್ ವೆಂಕಟರಾವ್ ಭಾನುವಾರ ನಿಧನರಾದರು.

ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ಜನಿಸಿದ್ದ ಕಿಶನರಾವ್ ವಿದ್ಯಾರ್ಥಿಯಾಗಿದ್ದಾಗಲೇ ಹೈದರಾಬಾದ್ ಪ್ರಾಂತ್ಯದ ವಿಮೋಚನೆಗಾಗಿ ನಡೆದಿದ್ದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಬಡತನ, ಕಷ್ಟಕಾರ್ಪಣ್ಯದಲ್ಲಿ ಬೆಳೆದರೂ ರಾಷ್ಟ್ರಪ್ರೇಮ ಅವರಲ್ಲಿ ಗಾಢವಾಗಿತ್ತು.

ಹಾಗಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಆಧ್ಯಾತ್ಮಿಕ ಗುರು ಆಗಿದ್ದ ಮತ್ತು ತಪಸ್ವಿ ಮುರುಡಿ ಭೀಮಜ್ಜ ಅವರ ಮಾರ್ಗದರ್ಶನದಲ್ಲಿ ಹಾಗೂ ಗಜೇಂದ್ರಗಡ ಶಿಬಿರಾಧಿಪತಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ದಿ.ಪುಂಡಲೀಕಪ್ಪ ಜ್ಞಾನಮೋಟೆ ಅವರ ಸಹವರ್ತಿಯಾಗಿ ರಜಾಕಾರರ ವಿರುದ್ಧ ನಡೆದ ಗೆರಿಲ್ಲಾ ಮಾದರಿಯ ಭೂಗತ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ ಸ್ವತಃ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದುದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿನ ನಿಜಾಮರ ವಿರುದ್ಧದ ಹೋರಾಟಕ್ಕೆ ಯುವಕರನ್ನೂ ಸಂಘಟಿಸಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿ ಸ್ವಾತಂತ್ರ್ಯ ಚಳವಳಿಗೆ ಅಣಿಗೊಳಿಸಿದ್ದನ್ನು ಈ ಭಾಗದ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ADVERTISEMENT

ಹೈದರಾಬಾದ್ ಪ್ರಾಂತ್ಯದ ಗಡಿಯಲ್ಲಿದ್ದ ಮುಂಬೈ ಪ್ರಾಂತ್ಯದ ಪ್ರದೇಶಗಳಲ್ಲಿ ಭೂಗತ ಚಟುವಟಿಕೆಗಳ ಮೂಲಕ ನಿಜಾಮರ ಸೈನಿಕರಾಗಿದ್ದ ರಜಾಕಾರರ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ದಿಟ್ಟತನದಿಂದ ಹೋರಾಡಿದವರಲ್ಲಿ ಕಿಶನರಾವ್ ಅವರೂ ಒಬ್ಬರಾಗಿದ್ದರು. ಹಳ್ಳಿಗಳ ಜನರಿಗೆ ಕಂಟಕಪ್ರಾಯರಾಗಿದ್ದ ರಜಾಕಾರರು ಸಂಗ್ರಹಿಸಿದ ಲೇವಿ ಕಾಳುಗಳಗಳನ್ನು ಲೂಟಿ ಹೊಡೆದು, ದೊಣ್ಣೆಗುಡ್ಡದಲ್ಲಿದ್ದ ನಿಜಾಮರ ಸುಂಕದ ಕಟ್ಟೆಗೆ ಬೆಂಕಿ ಹಚ್ಚಿ, ಅಷ್ಟೇ ಅಲ್ಲ ನಿಜಾಮ ಇನ್‌ಸ್ಪೆಕ್ಟರ್‌ಗೆ ಸೇರಿದ್ದ ಕುದುರೆಯನ್ನು ಅಪಹರಿಸಿದ್ದು , ಯಲಬುರ್ಗಾದಲ್ಲಿನ ನಿಜಾಮರ ತಹಶೀಲ್ದಾರ್ ಕಚೇರಿ ಲೂಟಿ ಮಾಡಿ ರಜಾಕಾರರಿಗೆ ಸೆಡ್ಡು ಹೊಡೆದಿದ್ದರು. ರಾಷ್ಟ್ರಪತಿ ಪ್ರಣವ ಮುಖರ್ಜಿ ಅವರ ಆಹ್ವಾನದ ಮೇರೆಗೆ ನವದೆಹಲಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಚಹಕೂಟದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ್ದರು.

ಆರಂಭದಲ್ಲಿ ದಿ.ಜಿ.ಎಸ್‌.ಮೇಲುಕೋಟೆ ಅವರು ನಡೆಸುತ್ತಿದ್ದ ನೃಪತುಂಗ ಪ್ರೌಢಶಾಲೆಯಲ್ಲಿ ಆಂಗ್ಲ, ಗಣಿತ ಅಧ್ಯಪಾಕರಾಗಿಯೂ ಸೇವೆಯಲ್ಲಿದ್ದಾಗಲೇ ರಾತ್ರಿ ವೇಳೆ ನಡೆಯುವ ಕಾಲೇಜಿನ ಮೂಲಕ ಕಾನೂನು ಪದವಿ ಪಡೆದಿದ್ದರು. ಕಷ್ಟ ಸಹಿಷ್ಣುತೆ, ಪ್ರಾಮಾಣಿಕ ಬದುಕಿಗೆ ಹೆಸರಾಗಿದ್ದ ಕಿಶನರಾವ್ ಅವರು ೧೯೫೨ ರಿಂದ ಅನೇಕ ದಶಕಗಳ ಅವಧಿಯವರೆಗೂ ಇಳಿ ವಯಸ್ಸಿನಲ್ಲೂ ವಕೀಲಿ ವೃತ್ತಿಯಲ್ಲಿ ತೊಡಗಿ ಯುವ ವಕೀಲರಿಗೆ ಮಾದರಿಯಾಗಿದ್ದರು ಎಂಬುದನ್ನು ವಕೀಲರು ನೆನಪಿಸಿಕೊಳ್ಳುತ್ತಾರೆ.

ಶ್ರದ್ಧಾಂಜಲಿ: ಭಾನುವಾರ ವಕೀಲರ ಸಂಘದ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವಕೀಲ ಹಾಗೂ ಮಾಜಿ ಶಾಸಕ ಕೆ.ಶರಣಪ್ಪ, ಸಂಘದ ಅಧ್ಯಕ್ಷ ಸಂಗನಗೌಡ ಸೇರಿದಂತೆ ಅನೇಕ ವಕೀಲರು ಭಾಗವಹಿಸಿ ಕಿಶನರಾವ ಅವರು ಸ್ವಾತಂತ್ರ್ಯ ಹೋರಾಟ ಮತ್ತು ವಕೀಲಿ ವೃತ್ತಿಯಲ್ಲಿ ತೋರಿದ ಬದ್ಧತೆ ಮತ್ತು ಕೊಡುಗೆಯನ್ನು ಸ್ಮರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.