ADVERTISEMENT

ಗಂಗಾವತಿ | ಸ್ನೇಹಿತರ ಸಮ್ಮಿಲನ; ನೆನಪುಗಳ ಅನುರಣನ

ವಡ್ಡರಹಟ್ಟಿ ಕ್ಯಾಂಪ್: ಶಾಲೆಯಲ್ಲಿ ‌ಮೊದಲ‌ ಬಾರಿಗೆ ಗುರುವಂದನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:30 IST
Last Updated 12 ಜನವರಿ 2026, 7:30 IST
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪ್ ನಲ್ಲಿ ನಡೆದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪ್ ನಲ್ಲಿ ನಡೆದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು   

ಗಂಗಾವತಿ: ಎರಡೂವರೆ ದಶಕಗಳ ಬಳಿಕ ಮೊದಲ ಬಾರಿಗೆ ಭೇಟಿಯಾದ ಅವರಲ್ಲಿ ಖುಷಿ ಮನೆ ಮಾಡಿತ್ತು. ಪರಸ್ಪರ ಮುಖ ಪರಿಚಯ ಅಸ್ಪಷ್ಟವಾಗಿದ್ದರೂ ಕೆಲವೇ ಹೊತ್ತಿನಲ್ಲಿ ಹಳೆಯ ಸ್ನೇಹಿತರು ಒಂದುಗೂಡಿದರು. ಬಳಿಕ ಅವರಲ್ಲಿ ಖುಷಿ, ಸಂಭ್ರಮ, ನೆನಪುಗಳ ಸಮ್ಮಿಲನ ಮನೆ ಮಾಡಿತ್ತು.

ಇದು ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪ್ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 1997-98ನೇ ಸಾಲಿನಲ್ಲಿ ಏಳನೆ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದಲ್ಲಿ ಕಂಡು ಬಂದ ಚಿತ್ರಣ.

ಶಾಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ‌ ನಡೆದ ಕಾರ್ಯಕ್ರಮದಲ್ಲಿ ವಿವಿಧೆಡೆ ನೆಲೆಸಿದ ಸ್ನೇಹಿತರು ಒಂದುಗೂಡಿದ್ದರು. ಹಿಂದೆ ಕಲಿಸಿದ ಶಿಕ್ಷಕರು, ಮೃತಪಟ್ಟ ಶಿಕ್ಷಕರ ಕುಟುಂಬದವರು ಹಾಗೂ ಶಾಲೆಯ ಈಗಿನ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳು ಮೊದಲು ಹೂಮಳೆಗೆರೆದು ಭರ್ಜರಿ ಸ್ವಾಗತ ಕೋರಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಎರೆಣ್ಣ ಅವರು ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಿದ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆಯ ಭಾವ ಮೂಡಿದೆ. ಪ್ರತಿಯೊಬ್ಬರಲ್ಲಿ ಶಿಸ್ತು, ಸ್ವಚ್ಚತೆ ಹಾಗೂ ಸಮಯ ಪ್ರಜ್ಞೆ ಅಗತ್ಯ ಎಂದರು.

ನಿವೃತ್ತ ಶಿಕ್ಷಕ ವಿಜಯಾಚಾರ್ ಆಲೂರು ಮಾತನಾಡಿ ಪ್ರತಿ ವಿದ್ಯಾರ್ಥಿಗಳು ಹೂವಿನಂತೆ ಕಾಣುತ್ತಿದ್ದೀರಿ, ಹೃದಯ ತುಂಬಿ ಬರುತ್ತಿದೆ, ಪೋಷಕರನ್ನು ಯಾರೂ ವೃದ್ದಾಶ್ರಮಕ್ಕೆ ಕಳಿಸಬೇಡಿ ಎಂದು ಕಿವಿಮಾತು ಹೇಳಿದರು.

ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ‌ಹಂಚಿಕೊಂಡರು.

ನಿವೃತ್ತ ಶಿಕ್ಷಕರಾದ ಮಲ್ಲಾರಾವ್ ಕುಲಕರ್ಣಿ, ನರ್ಮದಾಬಾಯಿ, ಶಿಕ್ಷಕರಾದ ಶಶಿಕಲಾ, ರಾಜೇಶ್ವರಿ, ವೆಂಕಟೇಶ, ಉಮಾದೇವಿ, ವೀಣಾ, ನೀಲಾಂಬಿಕಾ, ಶಾಲೆಯ ಹಿರಿಯ ‌ಶಿಕ್ಷಕ ಸದಾನಂದ, ಎಸ್‌ಡಿಎಂಸಿ ಅಧ್ಯಕ್ಷ ದುರ್ಗಪ್ಪ‌ ನಡವಲಮನಿ, ನಿವೃತ್ತ ಶಿಕ್ಷಕರ ಕುಟುಂಬದವರಾದ ಸರೋಜಮ್ಮ ಚಂದ್ರಶೇಖರ್, ಖಮರುನ್ನಿಸಾ ಬೇಗಂ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಶಿಕ್ಷಕ ದೇವಣ್ಣ ನಿರೂಪಿಸಿದರು.

ಕಡಿಮೆ ಸಮಯದಲ್ಲಿ ಸ್ನೇಹಿತರೆಲ್ಲರೂ ಸೇರಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಲು ಸಂಘಟಿತ ಪ್ರಯತ್ನ ಕಾರಣವಾಯಿತು. ನೆನಪುಗಳನ್ನು ಹಂಚಿಕೊಳ್ಳಲು ವೇದಿಕೆಯೂ ಲಭಿಸಿತು
ಶಿಲ್ಪಾ ತಮ್ಮಣ್ಣನವರ ಶಾಲೆಯ ಹಳೆ ವಿದ್ಯಾರ್ಥಿನಿ
ವಡ್ಡರಹಟ್ಟಿ ಕ್ಯಾಂಪ್ ಶಾಲೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದು ಬೇರೆ ವಿದ್ಯಾರ್ಥಿಗಳಿಗೂ ಮಾದರಿಯಾಗುವಂತೆ ಆಗಿದೆ
ಜ್ಯೋತಿ ಹಿರೇಮಠ ಶಾಲೆಯ ಹಳೆ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.