ಕೊಪ್ಪಳ: ಭಾರತವನ್ನು ಮದ್ಯಪಾನ ಮುಕ್ತ ದೇಶವನ್ನಾಗಿ ಮಾಡಲು ಮಹಾತ್ಮ ಗಾಂಧಿ ಅವರು ಪ್ರಯತ್ನಿಸಿದ್ದರು. ಅವರ ಕೆಲ ಆದರ್ಶಗಳನ್ನು ಅನುಸರಿಸುತ್ತಿರುವ ತಾಲ್ಲೂಕಿನ ಲೇಬಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮನೂರು ಗ್ರಾಮದ ಜನ ಮೂರ್ನಾಲ್ಕು ದಶಕಗಳಿಂದ ‘ಗಾಂಧಿ ಮಾರ್ಗ’ದಲ್ಲಿ ಸಾಗುತ್ತಿದ್ದಾರೆ.
ಅಂದಾಜು ಎರಡೂವರೆ ಸಾವಿರ ಜನಸಂಖ್ಯೆಯುಳ್ಳ ಗ್ರಾಮದಲ್ಲಿ ಎಲ್ಲೂ ಹೋಟೆಲ್‌ಗಳಿಲ್ಲ. ಅಂಗಡಿಗಳಿವೆ, ಗುಟ್ಕಾ ಮಾರುವುದಿಲ್ಲ. ಮದ್ಯ ಕುಡಿಯಲು ಅವಕಾಶ ಇಲ್ಲವೇ ಇಲ್ಲ. ಗ್ರಾಮದ ಸುತ್ತ ಹಸಿರ ಸಿರಿ ಆವರಿಸಿದೆ. ಸಾವಯವ ಕೃಷಿಯೇ ಜನರ ಜೀವಾಳ. ನಿಯಮಗಳನ್ನು ಕಟ್ಟುನಿಟ್ಟಾಗಿ, ಕರಾರುವಾಕ್ಕಾಗಿ ಪಾಲನೆ ಮಾಡುತ್ತಿರುವ ಕಾರಣ ಗ್ರಾಮವು ಈಗಲೂ ಆಧುನಿಕ ಭರಾಟೆಯ ಹಿಡಿತಕ್ಕೆ ಸಿಲುಕದೇ ಅಪ್ಪಟ ಹಳ್ಳಿಯ ಸೊಬಗನ್ನು ಉಳಿಸಿಕೊಂಡಿದೆ.
ಗ್ರಾಮದ ಹಿರಿಯರು ಸೇರಿಕೊಂಡು 3–4 ದಶಕಗಳ ಹಿಂದೆ ಕೈಗೊಂಡ ಮದ್ಯ ಮಾರಾಟ ನಿಷೇಧ ನಿರ್ಧಾರವನ್ನು ಈಗಿನ ಪೀಳಿಗೆಯೂ ಮುಂದುವರಿಸಿಕೊಂಡು ನಡೆದಿದೆ. ಕಾಮನೂರಿನಲ್ಲಿ ಐದಾರು ಕಿರಾಣಿ ಅಂಗಡಿಗಳಿದ್ದರೂ ಅಲ್ಲಿ ಗುಟ್ಕಾ ಚೀಟಿ ಕಾಣುವುದಿಲ್ಲ. ಹೊಸದಾಗಿ ಅಂಗಡಿ ಆರಂಭಿಸಿದರೂ ಈ ಬದ್ಧತೆ ಮುಂದುವರಿಸಿಕೊಂಡು ಹೋಗಿದ್ದಾರೆ.
ಗ್ರಾಮದ ಜನ ತಮ್ಮೂರಿನ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದಾರೆ. ಶಿಕ್ಷಕರು, ದಾನಿಗಳು ನೆರವಿನಿಂದ 75 ವರ್ಷ ಹಳೆಯದಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ₹21 ಲಕ್ಷ ಹಣ ಸಂಗ್ರಹಿಸಿ ಒಂದು ಎಕರೆ 20 ಗುಂಟೆ ಜಾಗ ಖರೀದಿಸಿದ್ದಾರೆ.
ಸಂಚಲನ ಮೂಡಿಸಿದ ಮೆರವಣಿಗೆ: ಕೊಪ್ಪಳದಲ್ಲಿರುವ ‘ಗಾಂಧಿ ಬಳಗ’ಗ ಸ್ನೇಹಿತರು ಕಳೆದ ವರ್ಷದ ಗಾಂಧಿ ಜಯಂತಿ ವೇಳೆ ಕೊಪ್ಪಳದಿಂದ ಕಾಮನೂರಿಗೆ ಪಾದಯಾತ್ರೆ ಮಾಡಿ ಕಾಮನೂರಿನ ಜನರಿಗೆ ನೈತಿಕ ಬೆಂಬಲ ನೀಡಿದ್ದರು.
ಪಾದಯಾತ್ರೆ ಬಳಿಕ ಸಂಸದ ರಾಜಶೇಖರ ಹಿಟ್ನಾಳ ಕಾಮನೂರು ಗ್ರಾಮವನ್ನು ದತ್ತು ಪಡೆದಿದ್ದಾರೆ. ಜಿಲ್ಲಾ ಪಂಚಾಯಿತಿಯು ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಕಾಮಗಾರಿಗಳನ್ನು ಗ್ರಾಮದಲ್ಲಿ ಕೈಗೊಳ್ಳುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಮೂರ್ನಾಲ್ಕು ದಶಕಗಳಿಂದ ನಮ್ಮೂರಿನಲ್ಲಿ ಯಾರೂ ಮದ್ಯ ಕುಡಿಯುವುದಿಲ್ಲ. ಈ ಕ್ರಮವನ್ನು ಯುವ ಪೀಳಿಗೆಯವರು ಉಳಿಸಿಕೊಂಡು ಬಂದಿದ್ದಾರೆಮಾನಪ್ಪ ಬಡಿಗೇರ ಗ್ರಾಮಸ್ಥ
ಕೆಲ ವರ್ಷಗಳ ಹಿಂದಷ್ಟೇ ಚಿಕ್ಕ ಕಿರಾಣಿ ಅಂಗಡಿ ಆರಂಭಿಸಿದ್ದೇನೆ. ಗ್ರಾಮದಲ್ಲಿ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದ ಗುಟ್ಕಾ ಮಾರಾಟ ನಿಷೇಧವನ್ನು ಪಾಲಿಸುತ್ತಿದ್ದೇನೆಈರಮ್ಮ ಅಂಗಡಿಯ ಒಡತಿ
ಕಾಮನೂರು ಮಾರ್ಗದಲ್ಲಿ ಬಿನ್ನಾಳ ವಿಪರೀತ ಮದ್ಯ ಮಾರಾಟದಿಂದ ಜಿಲ್ಲೆಯ ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿನ್ನಾಳ ಗ್ರಾಮದಲ್ಲಿ 2–3 ವರ್ಷಗಳಲ್ಲಿ 15ಕ್ಕೂ ಹೆಚ್ಚು ಯುವಕರು ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ಅವ್ಯಾಹತವಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಕೆಲ ತಿಂಗಳು ಹಿಂದೆ ಬಿನ್ನಾಳ ಗ್ರಾಮದ ಹಲವರು ಸಭೆ ನಡೆಸಿ ಗ್ರಾಮವನ್ನು ಮದ್ಯ ಮಾರಾಟ ಮುಕ್ತ ಗ್ರಾಮವಾಗಿಸಲು ಸಂಕಲ್ಪ ಮಾಡಿ ಜಾಗೃತಿ ಮೂಡಿಸಿದ್ದಾರೆ. ಆರಂಭದಲ್ಲಿ ಕೆಲವರು ಗುಪ್ತವಾಗಿ ಮದ್ಯ ಮಾರಲು ಮುಂದಾಗಿದ್ದಾಗ ಗ್ರಾಮಸ್ಥರೇ ಖರೀದಿಸಿ ಮತ್ತೆ ಮಾರದಂತೆ ಎಚ್ಚರಿಸಿದ್ದರು. ಈಗ ಅಲ್ಲಿ ಸಂಪೂರ್ಣವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.