ಕಾರಟಗಿ: ‘ಗಣೇಶೋತ್ಸವದಲ್ಲಿ ಡಿಜೆ ಬಳಕೆಗೆ ಅವಕಾಶ ಇಲ್ಲ. ನಿಯಮ ಮೀರಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಶಾಂತಿ–ಸೌಹಾರ್ದಕ್ಕೆ ಹೆಸರಾದ ಹಿಂದಿನ ಪರಂಪರೆಯನ್ನು ನಾಗರಿಕರು ಉಳಿಸಿಕೊಂಡು ಒಳ್ಳೆಯ ಹೆಸರು ತರಬೇಕು’ ಎಂದು ಇನ್‌ಸ್ಪೆಕ್ಟರ್ ಸುಧೀರಕುಮಾರ ಬೆಂಕಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
‘ಗಣೇಶ ವಿಸರ್ಜನೆ ಸಮಯದಲ್ಲಿ ಸಂಘಟನೆಗಳು ಡಿಜೆ ಬಳಕೆ ಕೈಬಿಡಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪೊಲೀಸ್, ಸ್ಥಳೀಯ ಸಂಸ್ಥೆ ಸೇರಿ ಇತರ ಇಲಾಖೆಗಳ ಪರವಾನಗಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಶಾಂತಿ ಕಾಪಾಡಬೇಕು’ ಎಂದರು.
ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಮಾತನಾಡಿ,‘ಪಟ್ಟಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಸರ್ಕಾರದ ಮಾರ್ಗದರ್ಶಿ ನಿಯಮಗಳನ್ನು ಪಾಲಿಸಬೇಕು. ಪರಿಸರ ಮಾಲಿನ್ಯ ಆಗದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿ ಶಾಂತಿ ಕಾಪಾಡಬೇಕು’ ಎಂದು ಹೇಳಿದರು.
ಪುರಸಭೆ ಸದಸ್ಯರಾದ ದೊಡ್ಡಬಸವರಾಜ ಬೂದಿ, ಮಂಜುನಾಥ ಮೇಗೂರು, ರೈತ ಮುಖಂಡ ಮರಿಯಪ್ಪ ಸಾಲೋಣಿ, ರಾಘವೇಂದ್ರ, ಯಮನೂರ ಚೌಡ್ಕಿ, ಪಿಎಸ್‍ಐ ಕಾಮಣ್ಣ, ಜೆಸ್ಕಾಂ ಅಧಿಕಾರಿ ಶಿವರಾಜ, ಎಎಸ್‍ಐ ಬಿ.ಎಸ್.ಬೋರಣ್ಣವರ್, ಪೊಲೀಸ್ ಸಿಬ್ಬಂದಿ ಜಾಫರ್, ಶರಣಪ್ಪ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.